
shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧ ಜಾಮೀನುರಹಿತ ಕಲಂಗಳಡಿ FIR – ಬಂಧನ ಸಾಧ್ಯತೆ?
ಶಿವಮೊಗ್ಗ (shivamogga), ನ. 15: ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗ ಜಯನಗರ ಠಾಣೆ ಪೊಲೀಸರು ನ. 14 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ಅನ್ಯ ಕೋಮು ಹಾಗೂ ಅನ್ಯ ಪಕ್ಷದ ವಿರುದ್ದ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಇನ್ಸ್’ಪೆಕ್ಟರ್ ಸಿದ್ದೇಗೌಡ ಅವರ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಕಲಂ 196 (1) ಹಾಗೂ ಕಲಂ 299 ರ ಅಡಿ ಪ್ರಕರಣ ದಾಖಲಾಗಿದೆ.
ಜಾಮೀನುರಹಿತ ಕಲಂಗಳಡಿ ಕೆ.ಎಸ್.ಈಶ್ವರಪ್ಪ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ, ಬಂಧನ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ, ಕೆ.ಎಸ್.ಈಶ್ವರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲಿದ್ದಾರಾ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಹೇಳಿದ್ದೇನು? : ನ.13 ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಕೆ.ಎಸ್.ಈಶ್ವರಪ್ಪ ಅವರು, ವಕ್ಫ್ ಬೋರ್ಡ್ ವಿವಾದದ ಕುರಿತಂತೆ ಮಾತನಾಡಿದ್ದರು. ‘ರೈತರ ಜಮೀನು, ಶಾಲಾ-ಕಾಲೇಜು, ಪುರಾತತ್ವ ಇಲಾಖೆ ಪ್ರದೇಶ ಸೇರಿದಂತೆ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟಿದ ಗ್ರಾಮವನ್ನೂ ಕೂಡ ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿಲ್ಲ. ಈ ನಡುವೆ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ. 4 ರಷ್ಟು ಮೀಸಲಾತಿ ಪ್ರಸ್ತಾಪ ಮಾಡಲಾಗಿದೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಇದು ಹೀಗೆ ಮುಂದುವರಿದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ. ಕಾಂಗ್ರೆಸ್ಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ’ ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳಿಕೆ ನೀಡಿದ್ದರು.
Shimoga: FIR against K.S.Eshwarappa under non-bailable section – possibility of arrest? On November 14, the Shimoga Jayanagar police station filed a voluntary complaint against former DCM KS Eshwarappa for making provocative statements.