ಡಿ. 9 ರಿಂದ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಪ್ರವಾಸ : ಬಿ ವೈ ವಿಜಯೇಂದ್ರ ಪೋಟೋಗೆ ಕೊಕ್..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಡಿ. 7: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನಲ್ಲಿ ಗುರುತಿಸಿಕೊಂಡಿರುವ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಡಿ. 9 ರಿಂದ ತಮ್ಮ ಸ್ವಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಪ್ರವಾಸ ಆರಂಭಿಸುತ್ತಿದ್ದಾರೆ!
ಕುಮಾರ್ ಬಂಗಾರಪ್ಪರ ಪ್ರವಾಸದ ಕುರಿತಂತೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಾಗಿದೆ. ಸದರಿ ಪೋಸ್ಟರ್ ನಲ್ಲಿ ಸೊರಬದ ವಿವಿಧೆಡೆ ಬಿಜೆಪಿ ಪಕ್ಷದ ನೂತನ ಬೂತ್ ಗಳ ರಚನೆಯ ವೇಳಾಪಟ್ಟಿ ನೀಡಲಾಗಿದೆ.
ಜೊತೆಗೆ ಪಕ್ಷದ ಪ್ರಮುಖ ನಾಯಕರ ಪೋಟೋಗಳನ್ನು ಹಾಕಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಭಾವಚಿತ್ರಗಳಿವೆ.
ಆದರೆ ಸದರಿ ಪೋಸ್ಟರ್ ನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಫೋಟೋ ಹಾಕಿಲ್ಲದಿರುವುದು ಕಂಡುಬಂದಿದೆ. ಉದ್ದೇಶಪೂರ್ವಕವಾಗಿಯೇ ಬಿ ವೈ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಕೊಕ್ ನೀಡಲಾಗಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಕೌಂಟರ್ : ಯತ್ನಾಳ್ ಗುಂಪಿನ ಪ್ರಮುಖ ನಾಯಕರಲ್ಲಿ, ಕುಮಾರ್ ಬಂಗಾರಪ್ಪ ಕೂಡ ಓರ್ವರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದ ಯತ್ನಾಳ್ ತಂಡದಲ್ಲಿ ಕುಮಾರ್ ಕೂಡ ಭಾಗಿಯಾಗಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ, ಸೊರಬಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಧಾರದ ಮೇಲೆ ಕುಮಾರ್ ಬಂಗಾರಪ್ಪ ಅವರ, ಐವರು ಕಟ್ಟಾ ಬೆಂಬಲಿಗರನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಉಚ್ಚಾಟಿಸಿದ್ದರು.
ಬಿ ವೈ ವಿಜಯೇಂದ್ರ ವಿರುದ್ದ ಕುಮಾರ್ ಬಂಗಾರಪ್ಪ ಬಂಡೇದಿರುವ ಕಾರಣದಿಂದಲೇ, ಸೊರಬದಲ್ಲಿನ ಅವರ ಬೆಂಬಲಿಗರನ್ನು ಉಚ್ಚಾಟಿಸಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು. ಇದಕ್ಕೆ ಕೌಂಟರ್ ಎಂಬಂತೆ ಕುಮಾರ್ ಬಂಗಾರಪ್ಪ ಅವರು ಡಿ. 9 ರಿಂದ ಸೊರಬದಲ್ಲಿ ಬಿಜೆಪಿ ಪಕ್ಷ ಸಂಘಟನೆ ಪ್ರವಾಸ ಆರಂಭಿಸಿದ್ದಾರೆ.
ಅವರ ಪ್ರವಾಸದ ಪೋಸ್ಟರ್ ನಲ್ಲಿ, ಬಿ ವೈ ವಿಜಯೇಂದ್ರ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಬಂಡಾಯವು, ಕುಮಾರ್ ಬಂಗಾರಪ್ಪ ಕಾರಣದಿಂದ ಸೊರಬ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ಬೆಳವಣಿಗೆಗಳು ನಡೆಯಲಿವೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಶಿಕಾರಿಪುರ ಅಥವಾ ಸೊರಬದಲ್ಲಿ ಯತ್ನಾಳ್ ತಂಡದ ಸಮಾವೇಶ!
*** ಶಿಕಾರಿಪುರ ಅಥವಾ ಸೊರಬದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡವು ಲಿಂಗಾಯಿತರ ಸಮಾವೇಶ ಆಯೋಜನೆಯ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಿ ಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರಗೆ, ಅವರ ತವರೂರಲ್ಲಿಯೇ ಕೌಂಟರ್ ನೀಡಲು ಭಿನ್ನಮತೀಯ ತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸಮಾವೇಶವೊಂದನ್ನು ಆಯೋಜನೆ ಮಾಡುವ ಚಿಂತನೆ ಯತ್ನಾಳ್ ಟೀಂನದ್ದಾಗಿದೆ ಎಂದು ಹೇಳಲಾಗುತ್ತಿದೆ.
Former Minister Kumar Bangarappa, identified in the group of MLA Basan Gowda Patil Yatnal who rebelled against BJP State President B Y Vijayendra, is starting a party organization tour in his home constituency Soraba from December 9!
