
ಶಿವಮೊಗ್ಗ – ಆಶ್ರಯ ಮನೆ ಹಂಚಿಕೆ ದಿಢೀರ್ ರದ್ದು : ಆಯುಕ್ತರಿಗೆ ಮುತ್ತಿಗೆ ; ಭಾರೀ ಹೈಡ್ರಾಮಾ!
ಶಿವಮೊಗ್ಗ, ಡಿ. 7: ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಡಿ. 7 ರ ಶನಿವಾರ ಮಹಾನಗರ ಪಾಲಿಕೆ ಆಡಳಿತ ಹಮ್ಮಿಕೊಂಡಿದ್ದ, ಆಶ್ರಯ ಯೋಜನೆಯಡಿ ನಿರ್ಮಿಸಿದ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ ಘಟನೆ ನಡೆಯಿತು.
ಇದರಿಂದ ಕುವೆಂಪು ರಂಗಮಂದಿರ ಆವರಣದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಫಲಾನುಭವಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಚನ್ನಬಸಪ್ಪ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ವಿರುದ್ದ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಹಕ್ಕುಪತ್ರ ವಿತರಣೆ ಮಾಡುವಂತೆ ಪಟ್ಟು ಹಿಡಿದರು. ಸ್ಥಳದಿಂದ ತೆರಳಲು ಮುಂದಾದ ಆಯುಕ್ತರ ಕಾರಿಗೆ ಪ್ರತಿಭಟನಾಕಾರರು ಅಡ್ಡ ಕುಳಿತರು. ರಂಗಮಂದಿರದ ಗೇಟ್ ಗಳನ್ನು ಮುಚ್ಚಿ ಧರಣಿ ನಡೆಸಲಾರಂಭಿಸಿದರು.
ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲು ಹರಸಾಹಸ ನಡೆಸಿದರು. ಈ ವೇಳೆ ಆಯುಕ್ತರು ಕಾರಿನಿಂದಿಳಿದು ಪೊಲೀಸ್ ಭದ್ರತೆಯಲ್ಲಿ ರಂಗಮಂದಿರದ ಆವರಣದಿಂದ ನಡೆದುಕೊಂಡು ಹೊರಹೋದ ಘಟನೆಯೂ ನಡೆಯಿತು!
ರದ್ದು : ಶಿವಮೊಗ್ಗ ನಗರದ ಹೊರವಲಯ ಗೋವಿಂದಾಪುರದಲ್ಲಿ, ಮಹಾನಗರ ಪಾಲಿಕೆ ಆಶ್ರಯ ಯೋಜನೆಯಡಿ ಅಪಾರ್ಟ್’ಮೆಂಟ್ ಗಳ ನಿರ್ಮಾಣ ಮಾಡಲಾಗಿದೆ. 652 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಶನಿವಾರ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭಕ್ಕೆ ಫಲಾನುಭವಿಗಳು ಕೂಡ ಆಗಮಿಸಿದ್ದರು. ಆದರೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ದಿಢೀರ್ ಆಗಿ ಸಮಾರಂಭ ರದ್ದುಗೊಳಿಸಿದ್ದರು. ಇದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮತ್ತೊಂದೆಡೆ, ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಆಶ್ರಯ ಸಮಿತಿ ಅಧ್ಯಕ್ಷರು ತಾವಾಗಿದ್ದು, ತಮ್ಮ ಗಮನಕ್ಕೆ ತರದೆ ಆಯುಕ್ತರು ಏಕಾಏಕಿ ಸಮಾರಂಭ ರದ್ದುಗೊಳಿಸಿದ್ದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆ ಮೇರೆಗೆ ಆಯುಕ್ತರು ಸಮಾರಂಭ ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿ, ಕುವೆಂಪು ರಂಗಮಂದಿರ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಫಲಾನುಭವಿಗಳೊಂದಿಗೆ ಶಾಸಕರು ಪ್ರತಿಭಟನೆ ಕೂಡ ನಡೆಸಿದರು.
ಪಾಲಿಕೆ ಆಯುಕ್ತೆ ವಿರುದ್ಧ ಶಾಸಕ ಚನ್ನಬಸಪ್ಪ ಆಕ್ರೋಶ!
*** ‘ಕಳೆದ 8 ವರ್ಷಗಳಿಂದ ಗೋವಿಂದಾಪುರ ಆಶ್ರಯ ಬಡಾವಣೆ ಮನೆಗಳ ಹಂಚಿಕೆಯಲ್ಲಿ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ, ಕಳೆದ ವಾರ ಆಶ್ರಯ ಸಮಿತಿ ಸಭೆ ನಡೆಸಿ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಣೆ ಮಾಡಲು ನಿರ್ಧರಿಸಲಾಗಿತ್ತು. ಶನಿವಾರ 652 ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು’ ಎಂದು ಪಾಲಿಕೆ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅವರ ಸೂಚನೆಯಂತೆ, ಪಾಲಿಕೆ ಆಯುಕ್ತರು ದಿಢೀರ್ ಆಗಿ ಸಮಾರಂಭ ರದ್ದುಗೊಳಿಸಿ ಆದೇಶಿಸಿದ್ದಾರೆ. ಸಚಿವರು ಕೈಗೊಂಬೆಯಂತೆ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಸ್ವತಃ ಆಯುಕ್ತರೇ ಸಚಿವರ ಅಣತಿಯಂತೆ ಕಾರ್ಯಕ್ರಮ ರದ್ದುಗೊಳಿಸಿದ್ದಾಗಿ ಹೇಳಿದ್ದಾರೆ. ಬಡವರ ಬದುಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚೆಲ್ಲಾಟವಾಡುತ್ತಿದ್ದಾರೆ. ತಾವು ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದು, ತಮ್ಮ ಅನುಮತಿ ಪಡೆದು ಆಯುಕ್ತರು ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ ಏಕಪಕ್ಷೀಯ ನಿರ್ಧಾರ ಕೈಗೊಂಡು, ತಮ್ಮ ಹಕ್ಕು ಚ್ಯುತಿ ಮಾಡಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
An incident took place at the Kuvempu rangamandira here on Saturday, December 7, when the Corporation administration suddenly canceled the programme of distribution of houses built under the ashraya scheme to the beneficiaries.