
shimoga | ಶಿವಮೊಗ್ಗ : ವರದಿ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಉಪ ಆಯುಕ್ತರು!
ಶಿವಮೊಗ್ಗ (shivamogga), ಮಾ. 6: ನೇರ ನೇಮಕಾತಿಗೆ ಆಗ್ರಹಿಸಿ, ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರು, ನಗರದ ಜಲ ಮಂಡಳಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳಕ್ಕೆ, ಮಾ. 6 ರಂದು ಪಾಲಿಕೆ ಉಪ ಆಯುಕ್ತರು ಭೇಟಿಯಿತ್ತು ನೌಕರರ ಅಹವಾಲು ಆಲಿಸಿದ್ದಾರೆ.
ಮಾರ್ಚ್ 3 ರಿಂದ ನೌಕರರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರತಿಭಟನಾ ಸ್ಥಳಕ್ಕೆ, ಯಾವೊಬ್ಬ ಅಧಿಕಾರಿಯು ಆಗಮಿಸಿ ನೌಕರರ ಅಹವಾಲು ಆಲಿಸುವ ಸೌಜನ್ಯ ತೋರಿರಲಿಲ್ಲ. ಈ ಬಗ್ಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಮಾ. 5 ರಂದು ‘ www.udayasaakshi.com ‘ ನ್ಯೂಸ್ ವೆಬ್’ಸೈಟ್ ವರದಿ ಪ್ರಕಟಿಸಿತ್ತು.
ಈ ನಡುವೆ ಮಾ. 6 ರಂದು ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ತುಷಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೌಕರರ ಅಹವಾಲು ಆಲಿಸಿದ್ದಾರೆ. ನೌಕರರಿಂದ ಮನವಿ ಸ್ವೀಕರಿಸಿ ಹಿಂದಿರುಗಿದ್ದಾರೆ.
ಸ್ಥಗಿತವಿಲ್ಲ: ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಗುರುವಾರ 4 ನೇ ದಿನಕ್ಕೆ ಕಾಲಿಟ್ಟಿದೆ. ನೇರ ನೇಮಕಾತಿ ಹಾಗೂ ನೇರ ಪಾವತಿ ವ್ಯವಸ್ಥೆ ಕುರಿತಂತೆ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳುವವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.
ಪಾಲಿಕೆಯಲ್ಲಿ ಕಳೆದ ಸರಿಸುಮಾರು 15 ರಿಂದ 20 ವರ್ಷಗಳಿಂದ, 116 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ನೀರುಗಂಟಿ, ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಸರ್ಕಾರವು ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ / ನೇರ ಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲು, ಈ ಹಿಂದೆಯೇ ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡಿದೆ. ಆದರೆ ಇಲ್ಲಿಯವರೆಗೂ ಆದೇಶವಾಗಿಲ್ಲ. ಕೇವಲ ಕಡತಗಳಿಗಷ್ಟೆ ಸೀಮಿತವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ನಮ್ಮಗಳ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಬೇಕು. ಈ ಮೂಲಕ ನೆಮ್ಮದಿಯುತ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.