
shimoga | ಶಿವಮೊಗ್ಗ | ಎಸ್ಎಸ್ಎಲ್’ಸಿ ಜೆರಾಕ್ಸ್ ಅಂಕಪಟ್ಟಿ ನೀಡಿ ಮೆಸ್ಕಾಂ ಕೆಲಸಕ್ಕೆ ಸೇರಿದ್ದ ಇಬ್ಬರಿಗೆ ಜೈಲು ಶಿಕ್ಷೆ!
ಶಿವಮೊಗ್ಗ(shivamogga), ಮಾ. 28: ಎಸ್ಎಸ್ಎಲ್’ಸಿ ಜೆರಾಕ್ಸ್ ಅಂಕಪಟ್ಟಿ ನೀಡಿ ಮೆಸ್ಕಾಂ ಕೆಲಸಕ್ಕೆ ಸೇರ್ಪಡೆಯಾಗಿದ್ದ ಇಬ್ಬರಿಗೆ, ಶಿವಮೊಗ್ಗದ ಸಿಜೆ ಮತ್ತು ಜೆಎಂಎಫ್’ಸಿ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಮಾರ್ಚ್ 26 ರಂದು ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕು ಆರುಂಡಿ ಗ್ರಾಮದ ನಿವಾಸಿ ಗಣೇಶಗೌಡ ಬಿ ಜಿ (23) ಹಾಗೂ ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ನಿವಾಸಿ ಬಿ ಬಿ ಗಿರೀಶ್ (27) ಜೈಲು ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.
ಕಲಂ 420 ಸಹಿತ 34 ಐಪಿಸಿ ಗೆ 2 ವರ್ಷ ಸಜೆ 4000 ರೂ ದಂಡ, ಕಲಂ 465 ಐಪಿಸಿ ಗೆ 6 ತಿಂಗಳು ಸಜೆ ಹಾಗೂ ಕಲಂ 468 ಸಹಿತ 34 ಐಪಿಸಿಗೆ 2 ವರ್ಷ ಸಜೆ ಹಾಗೂ 4000 ರೂ. ದಂಡ ಮತ್ತು ಕಲಂ 471 ಸಹಿತ 34 ಐಪಿಸಿಗೆ 6 ತಿಂಗಳ ಕಾಲ ಸಜೆ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ನ್ಯಾಯಾಧೀಶರಾದ ಶಿವಕುಮಾರ್ ಜಿ ಎನ್ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ಗಣೇಶಗೌಡ ಹಾಗೂ ಗಿರೀಶ್ ಅವರು, 24-11-2016 ರಂದು ಮೆಸ್ಕಾಂ ಕೆಲಸಕ್ಕೆ ಎಸ್ಎಸ್ಎಲ್’’ಸಿಯ ಅಸಲಿ ಅಂಕಪಟ್ಟಿಗೆ ಬದಲಾಗಿ, ಜೆರಾಕ್ಸ್ ಅಂಕಪಟ್ಟಿ ನೀಡಿ ಸೇರ್ಪಡೆಯಾಗಿದ್ದರು.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0144/2016 ಕಲಂ 420, 465, 468, 471 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಅಂದು ಪಿಎಸ್ಐ ಆಗಿದ್ದ ಇಮ್ರಾನ್ ಬೇಗ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
Shivamogga, Mar. 28: The Shivamogga CJ and JMFC court sentenced two people to prison on March 26 for joining MESCOM after submitting SSLC Xerox mark sheets.