
ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ನಗರಾಭಿವೃದ್ದಿ ಕೋಶದ ಸೂಚನೆಯೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 29: ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆಮೆ ವೇಗದಲ್ಲಿ ಸಾಗುತ್ತಿದೆ. ಸದ್ಯಕ್ಕೆ ತಾರ್ಕಿಕ ಅಂತ್ಯ ತಲುಪುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಸರ್ಕಾರಕ್ಕೆ ಅಂತಿಮ ಹಂತದ ವರದಿ ಸಲ್ಲಿಕೆಯಾಗುವುದು ಯಾವಾಗ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ!
ಜಿಲ್ಲಾಡಳಿತದ ಸೂಚನೆಯ ಹೊರತಾಗಿಯೂ, ಇಲ್ಲಿಯವರೆಗೂ ಮಹಾನಗರ ಪಾಲಿಕೆ ಆಡಳಿತ 2 ನೇ ಹಂತದ ವರದಿ ಸಿದ್ದಪಡಿಸಿ ಸಲ್ಲಿಸಿಲ್ಲ. ಈ ನಡುವೆ ಜಿಲ್ಲಾ ನಗರಾಭಿವೃದ್ದಿ ಕೋಶವು, ಪರಿಷ್ಕರಣೆಗೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ಜಿಲ್ಲಾ ನಗರಾಭಿವೃದ್ದಿ ಕೋಶದ ಮುಖ್ಯಸ್ಥರಾದ ಕೆ ರಂಗಸ್ವಾಮಿ ಅವರು ಜು. 29 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಉದ್ದೇಶಿಸಿರುವ ಪ್ರದೇಶಗಳು ಹಾಗೂ ಬಡಾವಣೆಗಳ ಸೇರ್ಪಡೆ ಕೋರಿ ನಾಗರೀಕರು ಸಲ್ಲಿಸುತ್ತಿರುವ ಮನವಿಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಹೇಳಲಾಗಿತ್ತು. ಪಾಲಿಕೆ ಆಡಳಿತದಿಂದ ವರದಿ ಸಲ್ಲಿಕೆಯಾಗಿಲ್ಲ. ಇತ್ತೀಚೆಗೆ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
30 ವರ್ಷಗಳ ನಂತರ ಪ್ರಕ್ರಿಯೆ! : ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಪಾಲಿಕೆ ಆಡಳಿತ ಸಿದ್ದಪಡಿಸಿರುವ ವರದಿಯಲ್ಲಿ, 9 ಗ್ರಾಮ ಪಂಚಾಯ್ತಿಯ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುವ ಚಿಂತನೆ ನಡೆಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೇ ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಈ ನಡುವೆ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ವಸತಿ ಬಡಾವಣೆಗಳನ್ನು, ಪಾಲಿಕೆ ಸಿದ್ದಪಡಿಸಿದ್ದ ವರದಿಯಲ್ಲಿ ಕೈಬಿಡಲಾಗಿತ್ತು. ಇದು ಬಡಾವಣೆಗಳ ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಸಮರ್ಪಕ ನಾಗರೀಕ ಸೌಲಭ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ನಾಗರೀಕರು, ತಮ್ಮ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಪ್ರಸ್ತುತ ಸಿದ್ದಪಡಿಸಿರುವ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪಾಲಿಕೆ ಆಡಳಿತಕ್ಕೆ ಸೂಚನೆ ನೀಡಿದ್ದರು.
ನಗರಾಭಿವೃದ್ದಿ ಪ್ರಾಧಿಕಾರದಿಂದಲೂ ಜಿಲ್ಲಾಡಳಿತ ವರದಿ ಪಡೆಯಲಿ…
*** ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ದಿಂದಲೂ ಜಿಲ್ಲಾಡಳಿತ ಅಭಿಪ್ರಾಯ ಸಂಗ್ರಹಿಸಬೇಕಾಗಿದೆ. ಯೋಜನಾ ಬದ್ಧ ನಗರ ನಿರ್ಮಾಣದ ಗುರುತರ ಜವಾಬ್ದಾರಿಯನ್ನು ನಗರಾಭಿವೃದ್ದಿ ಪ್ರಾಧಿಕಾರ ನಿರ್ವಹಿಸುತ್ತಿದೆ. ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡುವ ಕಾರ್ಯ ನಡೆಸುತ್ತದೆ. ಆದರೆ ಇಲ್ಲಿಯವರೆಗೂ ಪಾಲಿಕೆ ಆಡಳಿತ, ನಗರಾಭಿವೃದ್ದಿ ಪ್ರಾಧಿಕಾರದ ಅಭಿಪ್ರಾಯ – ಸಲಹೆ ಪಡೆಯುವ ಕಾರ್ಯ ಮಾಡಿಲ್ಲ. ಈ ಕಾರಣದಿಂದ ಪ್ರಸ್ತುತ ಪಾಲಿಕೆ ಆಡಳಿತ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದಪಡಿಸಿರುವ ಪಟ್ಟಿಯಲ್ಲಿ, ನಗರಕ್ಕೆ ಹೊಂದಿಕೊಂಡಂತಿರುವ ಹಲವು ವಸತಿ ಬಡಾವಣೆಗಳು ಹೆಸರಿಲ್ಲದಂತಾಗಿದೆ. ಈ ಕಾರಣದಿಂದ ನಗರಾಭಿವೃದ್ದಿ ಪ್ರಾಧಿಕಾರದ ಸಲಹೆ – ಸೂಚನೆ ಪಡೆಯುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕಾಗಿದೆ.
Shivamogga, Jul. 29: The Shivamogga Municipal Corporation area revision process is progressing at a snail’s pace. There are no signs of reaching a logical conclusion at the moment. When the final report will be submitted to the government has become a million dollar question!
Despite the instructions of the district administration, the Municipal Corporation administration has not yet prepared and submitted the 2nd stage report. Meanwhile, information has come to light that the District Urban Development Cell has instructed the Corporation administration to submit a report related to the revision.