
shimoga | accident news | ಶಿವಮೊಗ್ಗ : ವಿವಾಹ ನಿಶ್ಚಯವಾಗಿದ್ದ ಯುವತಿಯ ದುರಂತ ಅಂತ್ಯ!
ಶಿವಮೊಗ್ಗ (shivamogga), ಸೆಪ್ಟೆಂಬರ್ 8: ಕೆಲ ದಿನಗಳಲ್ಲಿಯೇ ಹಸಮಣೆ ಏರಬೇಕಿದ್ದ ಯುವತಿಯೋರ್ವಳು, ಅಪಘಾತದಲ್ಲಿ ಕೊನೆಯುಸಿರೆಳೆದ ದಾರುಣ ಘಟನೆ ಶಿವಮೊಗ್ಗ ನಗರದ ಮಲವಗೊಪ್ಪದ ಬಳಿ ಸೆಪ್ಟೆಂಬರ್ 8 ರ ಬೆಳಿಗ್ಗೆ ನಡೆದಿದೆ.
ದುಮ್ಮಳ್ಳಿ ಗ್ರಾಮದ ನಿವಾಸಿ ಕವಿತಾ ಬಾಯಿ (28) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಬೈಕ್ ಚಾಲನೆ ಮಾಡುತ್ತಿದ್ದ ಯುವತಿಯ ಸಹೋದರ ಸಂತೋಷ್ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅನಾಹುತದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಏನಾಯ್ತು? : ಕವಿತಾ ಬಾಯಿ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಎಂದಿನಂತೆ ಸಹೋದರನ ಬೈಕ್ ನಲ್ಲಿ ದುಮ್ಮಳ್ಳಿ ಗ್ರಾಮದಿಂದ ಶಿವಮೊಗ್ಗಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಲವಗೊಪ್ಪದ ಬಳಿ ರಾಂಗ್ ಸೈಡ್ ನಿಂದ ಆಗಮಿಸಿದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ.
ಇದರಿಂದ ಬೈಕ್ ನಿಂದ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದ ಕವಿತಾ ಬಾಯಿ ಮೇಲೆಯೇ ಖಾಸಗಿ ಸಿಟಿ ಬಸ್ ಹರಿದು ಹೋಗಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಕವಿತಾ ಬಾಯಿ ಅವರಿಗೆ ಮದುವೆ ನಿಶ್ಚಯವಾಗಿದ್ದು, 15 ದಿನದಲ್ಲಿ ಅವರ ವಿವಾಹ ನೆರವೇರಲಿತ್ತು. ಆದರೆ ಹಸಮಣೆ ಏರಬೇಕಿದ್ದ ಯುವತಿ ಮಸಣ ಸೇರುವಂತಾಗಿದ್ದು ನಿಜಕ್ಕೂ ದುರಂತದ ಸಂಗತಿಯಾಗಿದೆ.
Shivamogga, September 6: A young woman who was to get married in a few days died in an accident in a horrific incident that took place on the morning of September 8 near Malavagoppa in Shivamogga city.