
shimoga | ಶಿವಮೊಗ್ಗ : ಅಬ್ಬಲಗೆರೆ ಗ್ರಾಪಂ ಆಡಳಿತದಿಂದ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ (shivamogga), ಸೆಪ್ಟೆಂಬರ್ 10: ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತವು ಸೆಪ್ಟೆಂಬರ್ 10 ರಂದು ಬೆಳಿಗ್ಗೆ, ಅಬ್ಬಲಗೆರೆ ಗ್ರಾಮದಲ್ಲಿ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಹಾಗೂ ಮಿಷನ್ ಸುರಕ್ಷಾ ಯೋಜನೆ ಕುರಿತಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಭಾಗ್ಯ ಬಿ ಹೊಸಟ್ಟಿ ಅವರು ಮಾತನಾಡಿ, ‘ಶಿವಮೊಗ್ಗ ಜಿಲ್ಲೆಯು ಬಾಲ್ಯ ವಿವಾಹ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಜಾಗೃತರಾಗಬೇಕು. ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಬೇಕು’ ಎಂದು ನಾಗರೀಕರಿಗೆ ಕರೆ ನೀಡಿದರು.
ಗ್ರಾಪಂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿಡಿಓ) ಹೆಚ್ ರಾಜಪ್ಪ ಅವರು ಮಾತನಾಡಿ, ‘ಮಿಷನ್ ಸುರಕ್ಷಾ ಯೋಜನೆಯಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಬಗ್ಗೆ ಅಬ್ಬಲಗೆರೆ ಗ್ರಾಪಂ ಆಡಳಿತದಿಂದ ಈಗಾಗಲೇ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಪಂಚಾಯ್ತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದೆ.
ಇಂದು ಅಬ್ಬಲಗೆರೆ ಗ್ರಾಮದಲ್ಲಿ ಜಾಥಾ, ಬೀದಿ ನಾಟಕ ಮತ್ತೀತರ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರೂ, ಗ್ರಾಮದ ಮುಖಂಡರಾದ ಗೋಪಿನಾಯ್ಕ್, ಗ್ರಾಪಂ ಸದಸ್ಯ ಹರ್ಷ ಕೆ ಭೋವಿ, ಗ್ರಾಪಂ ಲೆಕ್ಕ ಸಹಾಯಕರಾದ ಅಕ್ಷತಾ, ಸರ್ಕಾರಿ ಶಾಲೆಗಳ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
Shivamogga, September 10: The Abbalagere Gram Panchayat administration on the outskirts of Shivamogga city organized public awareness programs on the ban on child marriage, the POCSO Act and the Mission Suraksha Yojana in Abbalagere village on the morning of September 10.