
shimoga | ಶಿವಮೊಗ್ಗ ಜಿಲ್ಲೆಯಲ್ಲಿ ಬಾಲಕಿಯರ ಗರ್ಭಧಾರಣೆ ಪ್ರಕರಣಗಳ ಸಂಖ್ಯೆ ಏರಿಕೆ : ಸರ್ಕಾರಕ್ಕೆ ಶಾಸಕ ಡಿ ಎಸ್ ಅರುಣ್ ಆಗ್ರಹವೇನು?
ಶಿವಮೊಗ್ಗ (shivamogga), ಸೆಪ್ಟೆಂಬರ್ 10: ಶಿವಮೊಗ್ಗ ಜಿಲ್ಲೆಯಲ್ಲಿ ಬಾಲಕಿಯರ ಗರ್ಭಧಾರಣೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆತಂಕ ವ್ಯಕ್ತಪಡಿಸಿದ್ದಾರೆ.
ಸದರಿ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ತಜ್ಞರ ಜೊತೆ ಸಮಾಲೋಚಿಸಿ, ತ್ವರಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಸೆಪ್ಟೆಂಬರ್ 10 ರಂದು ಡಿ ಎಸ್ ಅರುಣ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು, ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆ ವೇಗವಾಗಿ ವ್ಯಾಪಿಸುತ್ತಿದೆ. ಇದು ಸಮಾಜದ ಆರೋಗ್ಯ, ಭದ್ರತೆ ಮತ್ತುನೈತಿಕತೆಗೆ ಗಂಭೀರ ಸವಾಲು ಎಬ್ಬಿಸಿದೆ ಎಂದು ತಿಳಿಸಿದ್ದಾರೆ.
ಡಿ ಎಸ್ ಅರುಣ್ ಸಲಹೆಯೇನು? : ಸರ್ಕಾರ ಕೈಗೊಂಡಿರುವ ಸುರಕ್ಷಿತ – ಅಸುರಕ್ಷಿತ ಸ್ಪರ್ಶ ಜಾಗೃತಿ ಕಾರ್ಯಕ್ರಮದಲ್ಲಿ, ಹುಡುಗರಿಗು ಹಾಗೂ ಹುಡುಗಿಯರಿಗೆ ಪ್ರತ್ಯೇಕ ಬೋಧನೆ ನೀಡಲು ಮನೋವೈದ್ಯರು, ಮಕ್ಕಳ ವೈದ್ಯರು, ಸ್ತ್ರೀರೋಗ ತಜ್ಞರ ಸಹಭಾಗಿತ್ವ ಇರಬೇಕು.
ಪ್ರತಿಯೊಂದು ಜಿಲ್ಲೆಯಲ್ಲಿ ತುರ್ತು ಆಧಾರದ ಮೇಲೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಬೇಕು. ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಶಾಲಾ – ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸಬೇಕು. ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ತಪ್ಪಿಸ್ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.
ಸಂತ್ರಸ್ತ ಬಾಲಕಿಯರಿಗೆ ಆರೋಗ್ಯ ಮತ್ತು ಮನೋವೈದ್ಯಕೀಯ ನೆರವು ಕಲ್ಪಿಸಬೇಕು. ಅಪ್ರಾಪ್ತ ಬಾಲಕಿಯರ ಬದುಕು ಹಾಳಾಗದಂತೆ, ತಕ್ಷಣ ಸರ್ಕಾರ ನಿರ್ಧಾರಾತ್ಮಕ ಹೆಜ್ಜೆಯಿಡಬೇಕು ಎಂದು ಶಾಸಕ ಡಿ ಎಸ್ ಅರುಣ್ ಅವರು ಸಲಹೆ ನೀಡಿದ್ದಾರೆ.
Shivamogga, September 10: Legislative Council MLA DS Arun has expressed concern that the number of cases of girl pregnancy is increasing in Shivamogga district, saying that this is a matter of real concern.