
bengaluru | ಬೆಂಗಳೂರು – ‘ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಕೊಡುವ ದುಷ್ಟ ಶಕ್ತಿಗಳ ಮೆಟ್ಟಿ ನಿಲ್ಲೋಣ’ : ಸಿಎಂ
ಬೆಂಗಳೂರು (bengaluru) ಸೆ. 5: ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಕೊಡುವ ಶಕ್ತಿಗಳನ್ನು ಮೆಟ್ಟಿ ನಾವು ನಿಲ್ಲಬೇಕು. ಪ್ರಜಾಪ್ರಭುತ್ವವಾದಿಗಳ ಹೋರಾಟ ಯಶಸ್ವಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ (cm siddaramaiah) ನುಡಿದರು.
ಸೆ.15 ರ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೂ 2500 km ಉದ್ದದ ಮಾನವ ಸರಪಳಿ ಮತ್ತು ಪ್ರಜಾಪ್ರಭುತ್ವ ಸಂಭ್ರಮ ಆಚರಣೆ ಕುರಿತಂತೆ ವಿಧಾನಸೌಧದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾಪ್ರಭುತ್ವ ನಾಶ ಮಾಡಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳು ಹೆಚ್ಚೇನು ಇಲ್ಲ. ಅವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚು ಚಟುವಟಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವವಾದಿಗಳು ಹೆಚ್ಚು ಪ್ರಮಾಣದಲ್ಲಿದ್ದರೂ ಅವರು ಹೆಚ್ಚು ಕ್ರಿಯಾಶೀಲವಾಗಿಲ್ಲ. ಪ್ರಜಾಪ್ರಭುತ್ವ ನಾಶಕ್ಕೆ ಯತ್ನಿಸುತ್ತಿರುವವರನ್ನು ನಾವು ಮೆಟ್ಟಿ ನಿಲ್ಲೋಣ ಎಂದು ಸಿಎಂ ಅಭಿಪ್ರಾಯಪಟ್ಟರು.
ಬೀದರ್ ನಿಂದ ಚಾಮರಾಜನಗರದವರೆಗೂ ನಡೆಯುತ್ತಿರುವ ಅಭೂತಪೂರ್ವ , ಐತಿಹಾಸಿಕ ಮಾನವ ಸರಪಳಿ ಚಳವಳಿಯನ್ನು ಯಶಸ್ವಿಗೊಳಿಸಬೇಕು. ನಾನೂ ವಿಧಾನಸೌಧದ ಎದುರು ಮಾನವ ಸರಪಳಿಯಲ್ಲಿ ಇರುತ್ತೇನೆ. ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ಮಾತ್ರ ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಕ್ಫ್ ಸಚಿವ ರಹಮಾನ್ ಖಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ 200 ಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸಭೆಯಲ್ಲಿ ತೊಡಗಿಸಿಕೊಂಡಿದ್ದರು.