
shimoga | ಶಿವಮೊಗ್ಗದಿಂದ ಚೆನ್ನೈ, ಹೈದ್ರಾಬಾದ್ ಗೆ ವಿಮಾನ ಹಾರಾಟಕ್ಕೆ ಚಾಲನೆ : ದೆಹಲಿ ಸಂಪರ್ಕ ಯಾವಾಗ?
ಶಿವಮೊಗ್ಗ (shivamogga), ಅ. 10: ಶಿವಮೊಗ್ಗದಿಂದ ಸ್ಪೈಸ್ ಏರ್’ಜೆಟ್ ಸಂಸ್ಥೆಯು, ಅ. 10 ರ ಗುರುವಾರದಿಂದ ಚೆನ್ನೈ ಹಾಗೂ ಹೈದ್ರಾಬಾದ್’ಗೆ ವಿಮಾನಗಳ ಹಾರಾಟ ಆರಂಭಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಆವರಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ, ಸಂಸದ ಬಿ.ವೈ.ರಾಘವೇಂದ್ರ ಅವರು ವಿಧ್ಯುಕ್ತವಾಗಿ ವಿಮಾನಗಳ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು, ಸ್ಪೈಸ್ ಏರ್’ಜೆಟ್ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಂತರ ಬಿ ವೈ ರಾಘವೇಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿ ಎರಡು ವರ್ಷವಾಗುತ್ತಾ ಬಂದಿದೆ. ಸದರಿ ವಿಮಾನ ನಿಲ್ದಾಣಕ್ಕೆ, ಪ್ರತಿನಿತ್ಯ 12 ಬಾರಿ ವಿಮಾನಗಳ ಆಗಮನ ಹಾಗೂ ನಿರ್ಗಮನವಿದೆ. ಉತ್ತಮ ಏರ್ ಟ್ರಾಫಿಕ್ ಮೂಮೆಂಟ್ ಇದೆ. ಪ್ರಾರಂಭದಲ್ಲಿಯೇ ಇಷ್ಟೊಂದು ಏರ್ ಟ್ರಾಫಿಕ್ ಮೂಮೆಂಟ್ ಯಾವುದೇ ವಿಮಾನ ನಿಲ್ದಾಣಕ್ಕೂ ಲಭ್ಯವಾಗಿಲ್ಲ ಎಂದು ಸಂಸದರು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉತ್ತಮ ಭವಿಷ್ಯವಿದೆ. ನವರಾತ್ರಿ ಕೊಡುಗೆಯಾಗಿ ಸ್ಪೈಸ್ ಏರ್ ಜೆಟ್ ಸಂಸ್ಥೆಯು ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದ್ರಾಬಾದ್ ಗೆ ವಿಮಾನ ಸಂಚಾರ ಆರಂಭಿಸಿದೆ. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಮುಂದಿನ ಹಂತದಲ್ಲಿ ಸ್ಪೈಸ್ ಏರ್ ಜೆಟ್ ಸಂಸ್ಥೆಯು ಶಿವಮೊಗ್ಗದಿಂದ ದೆಹಲಿಗೂ ವಿಮಾನ ಹಾರಾಟ ಆರಂಭಿಸಲಿದೆ ಎಂದು ತಿಳಿಸಿದರು.
ಉಡಾನ್ ಯೋಜನೆಯಡಿ ವಿಮಾನಗಳ ಸಂಚಾರ ಆರಂಭವಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಕಾರಣವಾಗಿದೆ. ಎರಡನೇ ಹಂತದ ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲು ಉಡಾನ್ ಯೋಜನೆಯಡಿ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯೂ ವಿಮಾನ ಹಾರಾಟಕ್ಕೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸುವ ಕಾರ್ಯಗಳು ನಡೆಯುತ್ತಿವೆ. ಹಾಗೆಯೇ ನಾನಾ ಸಮಸ್ಯೆಗಳ ಪರಿಹಾರ ಕಾರ್ಯವು ಆಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದ್ದಾರೆ.