holehonnuru | ನಕಲಿ ಪೊಲೀಸರಿದ್ದಾರೆ ಎಚ್ಚರ..! : ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ಐನಾತಿ ಕಳ್ಳರು!!
ಭದ್ರಾವತಿ (bhadravati), ಜ. 6: ಸರಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ಮಹಿಳೆಯೋರ್ವರಲ್ಲಿ ಭೀತಿ ಮೂಡಿಸಿದ ನಕಲಿ ಪೊಲೀಸರಿಬ್ಬರು, ಚಾಕಚಕ್ಯತೆಯಿಂದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.
ಎಮ್ಮೆಹಟ್ಟಿ ಗ್ರಾಮದ ನಿವಾಸಿಯಾದ ಮಂಜುಳ ಬಾಯಿ (62) ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಜ. 4 ರ ಮಧ್ಯಾಹ್ನ ಸದರಿ ಘಟನೆ ನಡೆದಿದೆ.
ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಮಹಿಳೆಯು, ಹೊಳೆಹೊನ್ನೂರು ಪೇಟೆ ಬೀದಿಗೆ ಆಗಮಿಸಿದ್ದರು. ಈ ವೇಳೆ ಇಬ್ಬರು ಅಪರಿಚಿತ ವಂಚಕರು ಮಹಿಳೆಗೆ ಎದುರಾಗಿದ್ದಾರೆ. ತಮ್ಮನ್ನು ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.
‘ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಿನ್ನೆಯಷ್ಟೆ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಲಾಗಿದೆ. ನೀವು ಮಾಂಗಲ್ಯ ಸರ ಹಾಕಿಕೊಂಡು ಓಡಾಡಿದರೆ, ನಿಮ್ಮ ಸರವನ್ನು ಕಳ್ಳರು ಅಪಹರಿಸುವ ಸಾಧ್ಯತೆಯಿದೆ’ ಎಂದೆಲ್ಲ ಹೇಳಿ ಭೀತಿ ಹುಟ್ಟಿಸಿದ್ದಾರೆ.
ತದನಂತರ ಮಹಿಳೆಯಿಂದ ಮಾಂಗಲ್ಯ ಸರವನ್ನು ಪಡೆದುಕೊಂಡ ವಂಚಕರು, ಪೇಪರ್ ವೊಂದರಲ್ಲಿ ಸುತ್ತಿಕೊಟ್ಟಿದ್ದಾರೆ. ಮನೆಗೆ ಹೋಗಿ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಮಹಿಳೆಯು ಮನೆಗೆ ತೆರಳಿ ಪೇಪರ್ ತೆರೆದಾಗ, ಅದರಲ್ಲಿ ಕಲ್ಲುಗಳಿರುವುದು ಬೆಳಕಿಗೆ ಬಂದಿದೆ.
ವಂಚನೆಗೊಳಗಾಗಿರುವುದು ತಿಳಿದ ನಂತರ ಹೊಳೆಹೊನ್ನೂರು ಪೊಲೀಸ್ ಠಾಣೆಗೆ (holehonnuru police station) ಆಗಮಿಸಿ ದೂರು ನೀಡಿದ್ದಾರೆ. ಕಳುವಾದ ಮಾಂಗಲ್ಯ ಸರವು 30 ಗ್ರಾಂ ತೂಕದ್ದಾಗಿದ್ದು, ಇದರ ಮೌಲ್ಯ 2 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ನಕಲಿ ಪೊಲೀಸರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
Bhadravati, J 6: An incident in Holehonnur town of Bhadravati taluk, where mangalsutra was abducted by two fake policemen, who had created fear among the women that the menace of robbers had increased.
