shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಫೆ. 11: ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ವಿವಿಧೆಡೆ, ಕಳೆದ ಹಲವು ದಿನಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ದಂಧೆಗೆ ದಿಢೀರ್ ಆಗಿ ಬ್ರೇಕ್ ಬಿದ್ದಿರುವ ಮಾಹಿತಿಗಳು ಕೇಳಿಬರಲಾರಂಭಿಸಿವೆ!
ಹೌದು. ಇತ್ತೀಚೆಗೆ ಭದ್ರಾವತಿ ನಗರದ ಭದ್ರಾ ನದಿಯಲ್ಲಿ, ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ನೇತೃತ್ವದ ತಂಡಕ್ಕೆ, ದಂಧೆಕೋರರು ಬೆದರಿಕೆ ಹಾಕಿ ನಿಂದಿಸಿದ್ದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಸದರಿ ಘಟನೆಯ ನಂತರ, ಏಕಾಏಕಿ ಶಿವಮೊಗ್ಗ – ಭದ್ರಾವತಿ ತಾಲೂಕುಗಳ ಹಲವೆಡೆ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ – ಸಾಗಾಣಿಕೆಯನ್ನು, ದಂಧೆಕೋರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರೀ ಲೂಟಿ : ಕಳೆದ ಹಲವು ತಿಂಗಳುಗಳಿಂದ ತುಂಗಾ, ಭದ್ರಾ, ತುಂಗಾಭದ್ರಾ ನದಿಗಳಂಚಿನ ಪ್ರದೇಶಗಳಲ್ಲಿ ಅವ್ಯಾಹತವಾಗಿ ಕಾನೂನುಬಾಹಿರ ಮರಳು ಗಣಿಗಾರಿಕೆ ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು.
ಆದರೆ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಆಡಳಿತಕ್ಕೆ ಸಾಧ್ಯವಾಗಿರಲಿಲ್ಲ. ಸಂಬಂಧಿಸಿದ ಕೆಲ ಇಲಾಖೆಗಳ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ದಿವ್ಯ ಮೌನಕ್ಕೆ ಶರಣಾಗಿದ್ದರು. ಇದರಿಂದ ದಂಧೆಕೋರರು ನಿರಾಂತಕವಾಗಿ ದಂಧೆ ನಡೆಸಿಕೊಂಡು ಬಂದಿದ್ದರು.
ಇದರಿಂದ ಮರಳು ಮಾಫಿಯಾ ಹೆಮ್ಮರವಾಗಿ ಬೆಳೆಯುವಂತಾಗಿತ್ತು. ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿತ್ತು. ಆಡಳಿತದ ಮೇಲೆ ನಾಗರೀಕರು ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಭದ್ರಾವತಿಯಲ್ಲಿ ನಡೆದ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣದ ನಂತರ, ಆಡಳಿತದ ಕಾರ್ಯವೈಖರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಲಾರಂಭಿಸಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶಿವಮೊಗ್ಗ – ಭದ್ರಾವತಿ ತಾಲೂಕಿನ ಹಲವೆಡೆ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ – ಸಾಗಾಣೆಗೆ ದಿಢೀರ್ ಆಗಿ ತಡೆ ಬಿದ್ದಿದೆ. ದಂಧೆಕೋರರು ತಣ್ಣಗಾಗಿದ್ದಾರೆ. ಇದು ಎಷ್ಟು ದಿನಗಳವರೆಗೆ ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಎಚ್ಚೆತ್ತುಕೊಳ್ಳಲಿ : ಭದ್ರಾವತಿ ಮಾತ್ರವಲ್ಲದೆ, ಶಿವಮೊಗ್ಗ ನಗರದಲ್ಲಿಯೂ ಹಲವು ಮಾಫಿಯಾಗಳು ಸಕ್ರಿಯವಾಗಲಾರಂಭಿಸಿವೆ. ಮರಳು, ಭೂ ಮಾಫಿಯಾಗಳ ಹಾವಳಿ ಹೆಚ್ಚಾಗಿರುವ ದೂರುಗಳು ಕೇಳಿಬರಲಾರಂಭಿಸಿವೆ. ನಗರದ ಹೊರವಲಯದಲ್ಲಿ ಸರ್ಕಾರಿ ಭೂ ಕಬಳಿಕೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೆಲ ಅಧಿಕಾರಿ – ಸಿಬ್ಬಂದಿಗಳು ಸಾಥ್ ನೀಡುತ್ತಿರುವ ದೂರುಗಳಿವೆ.
ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಮಾಫಿಯಾಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದರ ಜೊತೆಗೆ, ದಂಧೆಕೋರರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಸರ್ಕಾರಿ ಅಧಿಕಾರಿ – ಸಿಬ್ಬಂದಿಗಳಿಗೂ ತಕ್ಕ ಶಾಸ್ತಿ ಮಾಡಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
Shimoga, Feb 11: In various parts of Shimoga and Bhadravati taluk, the illegal sand mining business that has been going on for the last few days has suddenly come to a halt!
Not only in Bhadravati, many mafias have become active in Shimoga city as well. Complaints are being heard about the increasing threat of sand and land mafias. Government land grabs are ongoing in the outskirts of the city. There are complaints supported by some officers and staff.
