
shimoga news | ಸಾಗರ ಜಿಲ್ಲಾ ಕೇಂದ್ರ – ನೂತನ ತಾಲೂಕುಗಳ ರಚನೆ : ಇಚ್ಛಾಶಕ್ತಿ ಪ್ರದರ್ಶಿಸುವರೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 6: ಕಳೆದ ಹಲವು ದಶಕಗಳ ನಂತರ, ಸಾಗರ ಜಿಲ್ಲಾ ಕೇಂದ್ರ ರಚನೆಯ ಕೂಗು ಮತ್ತೆ ಕೇಳಿಬಂದಿದೆ. ಈ ಸಂಬಂಧ ಸಾಗರ ಭಾಗದ ಪ್ರಮುಖರು ಸಭೆ ನಡೆಸಿದ್ದಾರೆ. ಪ್ರತ್ಯೇಕ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಆಡಳಿತಾತ್ಮಕ ದೃಷ್ಟಿ, ಅಭಿವೃದ್ದಿ, ನಾಗರೀಕರ ಅನುಕೂಲದ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಸೊರಬ, ಹೊಸನಗರ, ಶಿಕಾರಿಪುರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕುಗಳನ್ನು ಸಾಗರ ಜಿಲ್ಲಾ ಕೇಂದ್ರಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಆಗ್ರಹವಿದೆ.
ಈ ಸಂಬಂಧ ಈ ಹಿಂದೆ ಸಾಕಷ್ಟು ಹೋರಾಟಗಳು ಕೂಡ ನಡೆದಿದ್ದವು. ಆದರೆ ಈ ಹೋರಾಟಗಳು ಯಾವುದೇ ಫಲಪ್ರದ ನೀಡಿರಲಿಲ್ಲ. ರಾಜಕೀಯ ಲಾಬಿ, ಜನಪ್ರನಿಧಿಗಳ ಇಚ್ಛಾಶಕ್ತಿಯ ಕೊರತೆ ಕಂಡುಬಂದಿತ್ತು.
ಅದರಲ್ಲಿಯೂ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಬಾರಿ ಸಿಎಂ ಆಗಿದ್ದ ವೇಳೆ, ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಇದಕ್ಕೆ ಶಿವಮೊಗ್ಗ ಜಿಲ್ಲೆಯ ವಿವಿಧ ವರ್ಗಗಳ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ಸಂಘಟನೆಗಳು ಹೋರಾಟ ಕೂಡ ನಡೆಸಿದ್ದವು.
ಶಿಕಾರಿಪುರ ಬದಲಿಗೆ ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಇದರಿಂದ ಮಲೆನಾಡು ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಒತ್ತಾಯಿಸಲಾಗಿತ್ತು. ಅಂತಿಮವಾಗಿ ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆಯ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಸ್ವತಃ ಯಡಿಯೂರಪ್ಪರವರೇ ಸ್ಪಷ್ಟಪಡಿಸಿದ್ದರು.
ಇದೀಗ ದಿಢೀರ್ ಆಗಿ ಸಾಗರ ಜಿಲ್ಲಾ ಕೇಂದ್ರ ರಚನೆಯ ಕೂಗು ಕಾವು ಪಡೆಯಲಾರಂಭಿಸಿದೆ. ಇದಕ್ಕಾಗಿ ಸ್ಥಳೀಯ ನಾಯಕರು, ಸರ್ಕಾರದ ಮೇಲೆ ಒತ್ತಡ ತರಲು ಒಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯ ವಿಭಜನೆ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ.
ತಾಲೂಕು ಕೇಂದ್ರ : ಶಿವಮೊಗ್ಗ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ, ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಹೊಸ ತಾಲೂಕು ಕೇಂದ್ರ ರಚನೆಯಾಗಿಲ್ಲ! ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಇದ್ದ ಹೊನ್ನಾಳ್ಳಿ ಹಾಗೂ ಚನ್ನಗಿರಿ ತಾಲೂಕುಗಳನ್ನು, ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು.
ಸದ್ಯ ಶಿವಮೊಗ್ಗ ತಾಲೂಕು ವಿಭಜಿಸಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪತ್ಯೇಕ ತಾಲೂಕು ರಚಿಸಬೇಕೆಂಬ ಬೇಡಿಕೆಯಿಂದೆ. ಹಾಗೆಯೇ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಸೊರಬ ತಾಲೂಕಿನ ಆನವಟ್ಟಿ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪವನ್ನು ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡಬೇಕೆಂಬ ಆಗ್ರಹವಿದೆ.
ಗಮನಹರಿಸಲಿ : ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ವಿಷಯಗಳ ಅನುಷ್ಠಾನ ವಿಷಯದಲ್ಲಿ ಜಿಲ್ಲೆಯ ರಾಜಕೀಯ ಲಾಬಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲೆಯವರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಕಂದಾಯ ಇಲಾಖೆ ಸೇರಿದಂತೆ ಹಲವು ಪ್ರಮುಖ ಖಾತೆ ನಿರ್ವಹಿಸಿದರೂ ಉಪಯೋಗವಾಗಿಲ್ಲ.
ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಆಡಳಿತಾತ್ಮಕ ವಿಷಯಗಳ ಅನುಷ್ಠಾನದತ್ತ ಪ್ರಾಮಾಣಿಕ ಗಮನ ಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
Shivamogga, September 6: After many decades, the call for the formation of a separate district headquarters in Sagar has been heard again. In this regard, the leaders of the Sagar region have held a meeting. They have decided to fight for a separate district headquarters.
Currently, there is a demand to divide Shivamogga taluk and create separate taluks for Shivamogga city and rural areas. Similarly, there is a demand to declare Holehonnur in Bhadravati taluk, Anavatti in Sorab taluk, and Shiralakoppa in Shikaripura taluk as taluk centers.