
shimoga | ಶಿವಮೊಗ್ಗ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡ ಆವರಣದಲ್ಲಿ ಇದೆಂಥಾ ಅವ್ಯವಸ್ಥೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 23: ಶಿವಮೊಗ್ಗ ನಗರದ ಮಹಾವೀರ ವೃತ್ತದ ಬಳಿಯಿರುವ, ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿಯೇ, ಯುಜಿಡಿ ಅವ್ಯವಸ್ಥೆಯಿಂದ ಶೌಚಾಲಯಗಳ ಕೊಳಚೆ ನೀರು ಹೊರ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಕೊಳಚೆ ನೀರಿನಲ್ಲಿಯೇ ನಾಗರೀಕರು ಓಡಾಡುವಂತಾಗಿದೆ!
ಸದರಿ ಕಟ್ಟಡದಲ್ಲಿ ಉಪ ವಿಭಾಗಾಧಿಕಾರಿ (ಎಸಿ), ತಹಶೀಲ್ದಾರ್, ಖಜಾನೆ ಇಲಾಖೆ, ಸಾಂಖಿಕ್ಯ, ಸರ್ವೇ, ಗ್ರಾಮಾಂತರ ಆಹಾರ ಇಲಾಖೆ ಸೇರಿದಂತೆ ಸುಮಾರು 10 ಕ್ಕೂ ಅಧಿಕ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ.
ಹಾಗೆಯೇ ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರ ಕಚೇರಿಗಳಿವೆ. ಈ ಕಾರಣದಿಂದ ನಾನಾ ಕೆಲಸಕಾರ್ಯಗಳ ನಿಮಿತ್ತ ಪ್ರತಿನಿತ್ಯ ನೂರಾರು ನಾಗರೀಕರು ಸದರಿ ಕಟ್ಟಡಕ್ಕೆ ಆಗಮಿಸುತ್ತಾರೆ. ಹಾಗೆಯೇ ಪ್ರತಿನಿತ್ಯ ಹಿರಿಯ ಅಧಿಕಾರಿಗಳು ಓಡಾಡುತ್ತಾರೆ.
ಆದರೆ ಬಾಲರಾಜ ಅರಸ್ ರಸ್ತೆಯಿಂದ ಸದರಿ ಕಟ್ಟಡ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ, ಯುಜಿಡಿ ಅವ್ಯವಸ್ಥೆಯಿಂದ ಶೌಚಾಲಯಗಳ ಕೊಳಚೆ ನೀರು ಹೊರ ಹರಿಯುತ್ತಿರುವುದು ಕಂಡುಬರುತ್ತದೆ. ಭಾರೀ ದುರ್ನಾತವು ಬೀರುತ್ತಿದೆ.
ಕಳೆದ ಕೆಲ ತಿಂಗಳುಗಳಿಂದ ಯುಜಿಡಿ ಅವ್ಯವಸ್ಥೆಯಿಂದ ಕೊಳಚೆ ನೀರು ಸಮರ್ಪಕವಾಗಿ ಹರಿದು ಹೋಗದೆ, ಹೊರ ಹರಿಯುತ್ತಿದೆ. ತಿಂಗಳುಗಳೇ ಕಳೆದರೂ ಸದರಿ ಅವ್ಯವಸ್ಥೆ ಸರಿಪಡಿಸುವ ಗೋಜಿಗೆ ಯಾರೊಬ್ಬರು ಮುಂದಾಗಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಸದರಿ ಕಟ್ಟಡದಲ್ಲಿ ಪ್ರಮುಖ ಸರ್ಕಾರಿ ಇಲಾಖೆಗಳ ಕಚೇರಿಗಳಿವೆ. ಜನಪ್ರತಿನಿಧಿಗಳ ಕಚೇರಿಗಳಿವೆ. ನೂರಾರು ನೌಕರರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹಾಗೆಯೇ ಭಾರೀ ಸಂಖ್ಯೆಯ ನಾಗರೀಕರು ಕೂಡ ಪ್ರತಿನಿತ್ಯ ಆಗಮಿಸುತ್ತಾರೆ. ಆದರೆ ಶೌಚಾಲಯಗಳ ಕೊಳಚೆ ನೀರಿನ ಮೇಲೆಯೇ ಓಡಾಡುವಂತಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ನಾಲ್ಕೈದು ತಿಂಗಳುಗಳಿಂದ ಅವ್ಯವಸ್ಥೆಯಿದ್ದರೂ ಸರಿಪಡಿಸುವ ಗೋಜಿಗೆ ಸಂಬಂಧಿಸಿದವರು ಮುಂದಾಗದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಇದು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದ ಯುಜಿಡಿ ಅವ್ಯವಸ್ಥೆ ಸರಿಪಡಿಸಿ, ಶೌಚಾಲಯಗಳ ಕೊಳಚೆ ನೀರು ಹೊರ ಹರಿಯದಂತೆ ಅಗತ್ಯ ದುರಸ್ತಿ ಕಾರ್ಯಕೈಗೊಳ್ಳಬೇಕು ಎಂದು ನಾಗರೀಕರು ಆಡಳಿತಕ್ಕೆ ಆಗ್ರಹಿಸುತ್ತಾರೆ.
Shivamogga, September 23: At the entrance of the Sub-Divisional Officer’s office building near Mahaveer Circle in Shivamogga city, sewage water from the toilets is flowing out due to the UGD mess, emitting a foul smell. Citizens are walking in sewage water!