
shimoga | ಬೆಂಗಳೂರು, ತುಮಕೂರು ಪಾಲಿಕೆಗಳ ವ್ಯಾಪ್ತಿ ಪರಿಷ್ಕರಣೆ ಪೂರ್ಣ : ಶಿವಮೊಗ್ಗದಲ್ಲಿ ಇನ್ನೂ ಅಪೂರ್ಣ – ಗಮನಿಸುವರೆ ಸಿಎಂ ಸಿದ್ದರಾಮಯ್ಯ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 3: ಒಂದೆಡೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದ ಅಡಿ 5 ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದು, 368 ವಾರ್ಡ್ ಗಳ ರಚನೆ ಮಾಡಲಾಗಿದೆ. ಮತ್ತೊಂದೆಡೆ, ತುಮಕೂರು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆಯು ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಆದರೆ ವರ್ಷವೇ ಉರುಳಿದರೂ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಂಪೂರ್ಣ ನೆನೆಗುದಿಗೆ ಬೀಳುವಂತಾಗಿದೆ!
ಕಳೆದ 30 ವರ್ಷಗಳಿಂದ ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳೂ ಕೂಡ ಇತ್ತ ಚಿತ್ತ ಹರಿಸಿರಲಿಲ್ಲ. ನಾಗರೀಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರವು ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಆದೇಶ ಹೊರಡಿಸಿತ್ತು. ಅದರಂತೆ ಪಾಲಿಕೆ ಆಡಳಿತ ಪರಿಷ್ಕರಣೆ ಕಾರ್ಯ ಆರಂಭಿಸಿತ್ತು.
ಆದರೆ ಎರಡೂ ವರ್ಷವಾಗುತ್ತಾ ಬಂದರೂ, ಇಲ್ಲಿಯವರೆಗೂ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪೂರ್ಣಗೊಂಡಿಲ್ಲ. ನಗರ ವ್ಯಾಪ್ತಿ, ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಗಳ ರಚನೆಯಾಗಿಲ್ಲ.ಸದರಿ ಪ್ರಕ್ರಿಯೆಯ ಕುರಿತಂತೆ ಆಡಳಿತದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ!!
ನಿರ್ಲಕ್ಷ್ಯವೇಕೆ? : ಪಾಲಿಕೆ ಆಡಳಿತ ಸಿದ್ದಪಡಿಸಿರುವ ನಗರ ವ್ಯಾಪ್ತಿ ಪರಿಷ್ಕರಣೆ ವರದಿ ಆಧಾರದ ಮೇಲೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೊದಲ ಹಂತದ ಸಭೆ ನಡೆಸಿದ್ದರು. ಸಂಬಂಧಿಸಿದ ಅಧಿಕಾರಿಗಳಿಗೆ ಕೆಲ ಸಲಹೆ – ಸೂಚನೆಗಳನ್ನು ನೀಡಿದ್ದರು. ಕಾಲಮಿತಿಯೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರು.
ಸದರಿ ಸಭೆ ನಡೆದು ನಾಲ್ಕೈದು ತಿಂಗಳಾಗಿದೆ, ತದನಂತರ ಯಾವುದೇ ಬೆಳವಣಿಗೆಯಾಗಿಲ್ಲ. ಡಿಸಿ ಸೂಚನೆ ಹೊರತಾಗಿಯೂ ಪಾಲಿಕೆ ಆಡಳಿತ ಇಲ್ಲಿಯವರೆಗೂ ಎರಡನೇ ಹಂತದ ವರದಿ ಸಲ್ಲಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲವಾಗಿದೆ.
ಗಮನಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಆದ್ಯ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
ಪರಿಷ್ಕರಣೆ ಜೊತೆಗೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಲು ಆಗ್ರಹ
*** ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷ್ಕರಣೆ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ವಾರ್ಡ್ ಗಳ ಪುನರ್ ರಚನೆ ಮಾಡಬೇಕು. ಹಾಗೆಯೇ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡಬೇಕಾಗಿದೆ. ಕಳೆದ ಹಲವು ದಶಕಗಳಿಂದ 35 ವಾರ್ಡ್ ಗಳಿವೆ. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ವೇಳೆಯೂ, ವಾರ್ಡ್ ಗಳ ಸಂಖ್ಯೆ ಪರಿಷ್ಕರಣೆ ಮಾಡಲಿಲ್ಲ. ಪ್ರಸ್ತುತ ನಗರದ ಬೆಳವಣಿಗೆ, ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ – ವಿಸ್ತೀರ್ಣಕ್ಕೆ ಅನುಗುಣವಾಗಿ ವಾರ್ಡ್ ಗಳ ರಚನೆ ಮಾಡಬೇಕು. ಕನಿಷ್ಠ 70 ವಾರ್ಡ್ ಗಳಾದರೂ ರಚನೆಯಾಗಬೇಕು ಎಂಬುವುದು ಕೆಲ ಮಾಜಿ ಕಾರ್ಪೋರೇಟರ್ ಗಳ ಆಗ್ರಹವಾಗಿದೆ.
ವಾರ್ಡ್ ಗಳಿಗೆ ಭೇಟಿ ನೀಡುವರೆ ಅಧಿಕಾರಿಗಳು?
*** ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸರಿಸುಮಾರು ಎರಡು ವರ್ಷವಾಗುತ್ತಿದೆ. ಸದ್ಯಕ್ಕೆ ವಾರ್ಡ್ ಚುನಾವಣೆ ನಡೆಯುವ ಯಾವುದೇ ಪ್ರಕ್ರಿಯೆಗಳು ಗೋಚರಿಸುತ್ತಿಲ್ಲ. ಕಾರ್ಪೋರೇಟರ್ ಗಳ ಅನುಪಸ್ಥಿತಿಯು, ನಾಗರೀಕರ ಕೆಲಸಕಾರ್ಯಗಳ ಮೇಲೆ ಬೀರುವಂತಾಗಿದೆ. ಪ್ರತಿಯೊಂದಕ್ಕೂ ನಾಗರೀಕರು ಪಾಲಿಕೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈ ಕಾರಣದಿಂದ ಪಾಲಿಕೆ ಹಿರಿಯ ಅಧಿಕಾರಿಗಳು ಪ್ರತಿಯೊಂದು ವಾರ್ಡ್ ಗೂ ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸುವ ಕಾರ್ಯ ನಡೆಸಿ, ಕಾಲಮಿತಿಯೊಳಗೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಜನಸಾಮಾನ್ಯರ ಆಗ್ರಹವಾಗಿದೆ.
shivamogga, october 3 : Five municipalities have been created under the Greater Bengaluru Authority, with 368 wards. The Tumkur Municipal Corporation area revision process is almost at its final stage. But even after a year, the Shivamogga Municipal Corporation area revision is not complete.