shimoga | ಶಿವಮೊಗ್ಗ : ಕಟ್ಟಡ ಕುಸಿದು ವ್ಯಕ್ತಿ ಸಾವು ಪ್ರಕರಣ – ಕಾರ್ಮಿಕ ಇಲಾಖೆ ವಿರುದ್ಧ ಶಾಸಕಿ ಶಾರದಾ ಪೂರ್ಯನಾಯ್ಕ್ ಆಕ್ರೋಶ!
ಶಿವಮೊಗ್ಗ (shivamogga), ಅಕ್ಟೋಬರ್ 27: ಶಿವಮೊಗ್ಗದ ಸಿದ್ಲೀಪುರ ಗ್ರಾಮದ ಕಾರ್ಮಿಕ ಇಲಾಖೆ ಕಟ್ಟಡದ ಶೆಡ್ ನ ಗೋಡೆ ಕುಸಿದು ಕಾರ್ಮಿನೋರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಕುರಿತಂತೆ, ಕಾರ್ಮಿಕ ಇಲಾಖೆ ವಿರುದ್ಧ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 28 ರಂದು ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಘಟನೆಯ ಕುರಿತಂತೆ ಶಾಸಕರು ಪ್ರಸ್ತಾಪಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಮಿಕ ಇಲಾಖೆ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು.
ಕಾರ್ಮಿಕ ಇಲಾಖೆ ಅಧಿಕಾರಿ ಮಾತನಾಡಿ, ಶೆಡ್ ತೆರವುಗೊಳಿಸಲು ಮಂಜು ಹಾಗೂ ಮುತ್ತು ಎಂಬುವರು ತೆರಳಿದ್ದರು. ಇವರು ಶೆಡ್ ತೆರವುಗೊಳಿಸುವ ಕುರಿತಂತೆ ಯಾವುದೇ ಮಾಹಿತಿಯೂ ನೀಡಿರಲಿಲ್ಲ. ಘಟನೆಯ ಕುರಿತಂತೆ ಪೊಲೀಸ್ ತನಿಖೆ ನಡೆಯುತ್ತಿದೆ. ತನಿಖೆ ನಂತರ ಸತ್ಯಾಂಶ ಗೊತ್ತಾಗಲಿದೆ. ಹಾಗೆಯೇ ಸದರಿ ಕಟ್ಟಡದ ಉಸ್ತುವಾರಿಯೂ ಇನ್ನೂ ಕಾರ್ಮಿಕ ಇಲಾಖೆಗೆ ಬಂದಿಲ್ಲವೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಜಾಣತನದ ಉತ್ತರ ನೀಡಬೇಡಿ. ಅವರಾಗಿಯೇ ಹೇಗೆ ಶೆಡ್ ತೆರವಿಗೆ ಮುಂದಾಗುತ್ತಾರೆ? ಏನೂ ಮಾತನಾಡುತ್ತಿದ್ದೀರಿ? ಘಟನೆಗೆ ಯಾರೂ ಜವಾಬ್ದಾರರು? ಸಾಮಾನ್ಯ ಜ್ಞಾನವಿದೆಯಾ?’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
‘ನಿಮ್ಮ ಅನುಮತಿಯಿಲ್ಲದೆ ಹೇಗೆ ಶೆಡ್ ತೆರವುಗೊಳಿಸಲು ಮುಂದಾಗುತ್ತಾರೆ? ಇದೀಗ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗುತ್ತಿದ್ದೀರಾ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಕೂಡ ಸೌಜನ್ಯಕ್ಕಾದರೂ ಭೇಟಿಯಾಗಿ ಸಾಂತ್ವನ ಹೇಳಲು ಮುಂದಾಗಿಲ್ಲ.
ಇಲಾಖೆಯು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮನುಷ್ಯರ ಜೀವನದ ಜೊತೆ ಆಟವಾಡುತ್ತಿದ್ದೀರಿ. ಹೊಟ್ಟೆಪಾಡಿಗೆ ಬಂದವರಾಗಿದ್ದಾರೆ. ಯಾರ ಅನುಮತಿಯಿಲ್ಲದೆ ಶೆಡ್ ತೆರವಿಗೆ ಮುಂದಾಗುತ್ತಾರಾ?’ ಎಂದು ತರಾಟೆಗೆ ತೆಗೆದುಕೊಂಡರು.
ಮಾಹಿತಿ : ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ನಡೆಸಿದರು. ಪ್ರತಿಯೊಂದು ಇಲಾಖೆಯಲ್ಲಿನ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಧ್ಯಾಹ್ನದ ನಂತರವೂ ಸಭೆ ಮುಂದುವರಿದಿತ್ತು.
ಸಭೆಯಲ್ಲಿ ತಹಶೀಲ್ದಾರ್ ವಿ ಎಸ್ ರಾಜೀವ್, ಜಿಪಂ ಅಧಿಕಾರಿ ನಂದಿನಿ, ತಾಪಂ ಅಧಿಕಾರಿ ಭೀಮಾನಾಯ್ಕ್, ಮ್ಯಾನೇಜರ್ ಪ್ರವೀಣ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, October 27: MLA Sharada Pooryanaik has expressed strong anger against the Labour Department over the incident in which a worker died and another was injured when the wall of a shed of the Labour Department building in Sidlipura village, Shivamogga, collapsed.
