shimoga news | ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ!
*ಸಣ್ಣ ನೀರಾವರಿ ಇಲಾಖೆ ವಿರುದ್ದ ಗ್ರಾಮಸ್ಥರ ಅಸಮಾಧಾನ..!!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿಸೆಂಬರ್ 30: ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..!’ ಎಂಬ ಮಾತು, ಶಿವಮೊಗ್ಗ ತಾಲೂಕಿನ ಬಸವನಗಂಗೂರು ಕೆರೆಗೆ ತುಂಗಾ ನದಿಯಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಗಮನಿಸಿದರೆ ನಿಜವೆನಿಸುತ್ತದೆ..!
ಹೌದು. ಕೆರೆಗಳಲ್ಲಿ ಬೇಸಿಗೆ ವೇಳೆಯೂ ನೀರಿರಬೇಕು. ಜನ – ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಸದುದ್ದೇಶದಿಂದ, ಏತ ನೀರಾವರಿ ಯೋಜನೆಗಳ ಮೂಲಕ ತುಂಗಾ ನದಿಯಿಂದ ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಅದರಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಜನ – ಜಾನುವಾರುಗಳಿಗೆ ಅನುಕೂಲಕರವಾಗಿರುವ ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಬಸವನಗಂಗೂರು ಕೆರೆಗೂ ಪೈಪ್ ಲೈನ್ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಕೆರೆಗೆ ನೀರು ಹರಿಸಲಾಗುತ್ತಿದ್ದರೂ ಇಲ್ಲಿಯವರೆಗೂ ಕೆರೆ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ. ನಿರೀಕ್ಷಿತ ಮಟ್ಟದ ನೀರು ಸಂಗ್ರಹವಾಗಿಲ್ಲ.
ಪ್ರಸ್ತುತ ಪೈಪ್ ನಲ್ಲಿ ಬರುತ್ತಿರುವ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ. ಸದರಿ ನೀರಿನಲ್ಲಿ ಕೆರೆಯ ಸಣ್ಣಪುಟ್ಟ ಗುಂಡಿಗಳು ಭರ್ತಿಯಾಗುತ್ತಿಲ್ಲ. ಸುಮಾರು 35 ಎಕರೆಗೂ ಅಧಿಕ ವಿಸ್ತೀರ್ಣವಿರುವ ಕೆರೆಗೆ ಈ ರೀತಿ ನೀರು ಬಿಟ್ಟರೆ, ವರ್ಷ ಕಳೆದರೂ ಭರ್ತಿಯಾಗುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ಬಿಸಿಲಿನ ಕಾರಣದಿಂದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಸಂಪೂರ್ಣ ಕೆರೆಯೇ ಬರಿದಾಗುವ ಸಾಧ್ಯತೆಯಿದೆ. ಇನ್ನಾದರೂ ತುಂಗಾ ನದಿಯಿಂದ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿಸಿ, ಬೇಸಿಗೆ ವೇಳೆ ಜನ – ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
ಅಭಿವೃದ್ದಿಗೊಳಿಸಿ : ಬಸವನಗಂಗೂರು ಕೆರೆಯು ನಗರಕ್ಕೆ ಹೊಂದಿಕೊಂಡಂತೆ ಇದ್ದು, ಸ್ಥಳೀಯ ರೈತರ ಜೀವನಾಡಿಯಾಗಿದೆ. ಸದರಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಬೇಕು. ಸಂರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಕೈಗೊಳ್ಳಬೇಕು. ಕೆರೆಯಲ್ಲಿ ಹೂಳು ತೆಗೆದು, ದಂಡೆ ರಸ್ತೆ ಡಾಂಬರು ರಸ್ತೆಯಾಗಿ ಪರಿವರ್ತಿಸಬೇಕು. ಬೀದಿ ದೀಪಗಳ ಅಳವಡಿಕೆ, ಕೆರೆಯಲ್ಲಿ ಬೋಟಿಂಗ್, ದಂಡೆಯ ಬಳಿ ನಾಗರೀಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ವಾಕಿಂಗ್ ಪಾಥ್ ವ್ಯವಸ್ಥೆ ಮಾಡುವ ಮೂಲಕ ಪಿಕ್’ನಿಕ್ ತಾಣವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯ ಬಡಾವಣೆಗಳ ನಿವಾಸಿಗಳು ಸಲಹೆ ನೀಡುತ್ತಾರೆ.
ರಸ್ತೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ!

*** ಬಸವನಗಂಗೂರು ಕೆರೆ ಏರಿ ರಸ್ತೆಯು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬಡಾವಣೆಗಳ ನಾಗರೀಕರು ಸಂಚರಿಸುತ್ತಾರೆ. ಆದರೆ ಸದರಿ ರಸ್ತೆಯ ಅರ್ಧ ಭಾಗ ಮಣ್ಣಿನ ರಸ್ತೆಯಾಗಿದೆ. ಪ್ರಸ್ತುತ ಭಾರೀ ದೊಡ್ಡ ಪ್ರಮಾಣದ ಗುಂಡಿ – ಗೊಟರುಗಳು ಬಿದ್ದಿವೆ. ಜನ – ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಕಾರಣದಿಂದ ಸದರಿ ರಸ್ತೆಯನ್ನು ಡಾಂಬರು ರಸ್ತೆಯಾಗಿ ಮೇಲ್ದರ್ಜೆಗೇರಿಸಿ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಈ ಸಂಬಂಧ ಸಣ್ಣ ನೀರಾವರಿ ಇಲಾಖೆಗೆ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗರೀಕರು ದೂರುತ್ತಾರೆ.
Shivamogga, December 30: The saying, ‘A penny’s worth of buttermilk for an elephant’s stomach..!’ seems true when you consider the amount of water being discharged from the Tunga River into the Basavanagangur Lake in Shivamogga taluk..! Yes. There should be water in the lakes even during summer. With the good intention of providing convenience to people and livestock, water is being pumped from the Tunga River to the lakes of various villages in Shivamogga taluk through lift irrigation projects. Water is also being pumped into Basavanagangur Lake, which is adjacent to Shivamogga, through a pipeline. However, although water has been pumped into the lake for the past three months, the lake has not reached its maximum level yet. The expected level of water has not been accumulated. #minor_irrigation
