
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ಭದ್ರಾವತಿ (bhadravathi), ಜೂ. 30: ಭದ್ರಾವತಿ ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (visl) ಗೆ ಭಾನುವಾರ ಕೇಂದ್ರ ಬೃಹತ್ ಕೈಗಾರಿಕೆ – ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (h d kumarswamy) ಅವರು ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದರು.
ಕಾರ್ಖಾನೆಯ (visl factory) ವಿವಿಧ ವಿಭಾಗಗಳಿಗೆ ಭೇಟಿಯಿತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ (b y raghavendra), ಶಾಸಕರಾದ ಬಿ.ಕೆ.ಸಂಗಮೇಶ್ವರ್ (b k sangameshwara), ಶಾರದಾ ಪೂರ್ಯಾನಾಯ್ಕ್ (sharada puryanaik), ಭೋಜೆಗೌಡ (bojegowda) ಸೇರಿದಂತೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಷ್ಟದ ಹಾದಿ : ದೇಶದ ಪ್ರಸಿದ್ದ ಕಾರ್ಖಾನೆಗಳಲ್ಲಿ ವಿಐಎಸ್ಎಲ್ ಒಂದಾಗಿತ್ತು. ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. ಆದರೆ ಕಾಲಾಂತರದಲ್ಲಿ ಕಾರ್ಖಾನೆಯು ನಷ್ಟದ ಹಾದಿ ಹಿಡಿದಿತ್ತು. ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗಳಿಗೂ ಚಾಲನೆ ದೊರಕಿತ್ತು. ಟೆಂಡರ್ ಆಹ್ವಾನಿಸಿತ್ತು. ಆದರೆ ಬಿಡ್ ದಾರರು ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಕ್ರಿಯೆ ಕೈಬಿಟ್ಟು, ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು.
ಈ ನಡುವೆ ಕಾರ್ಖಾನೆ ಪುನಾರಾರಂಭಕ್ಕೆ ಕ್ರಮಕೈಗೊಳ್ಳಬೇಕೆಂದು ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಮನವೊಲಿಸಿ, ಕಾರ್ಖಾನೆ ಪುನಾರಾರಂಭಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದರು.
ಹೊಸ ನಿರೀಕ್ಷೆ : ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವರಾದ ನಂತರ, ಕಾರ್ಖಾನೆಯು ಪೂರ್ಣ ಪ್ರಮಾಣದಲ್ಲಿ ಪುನಾರಾರಂಭದ ಹೊಸ ನಿರೀಕ್ಷೆಗಳು ಗರಿಗೆದರುವಂತೆ ಮಾಡಿವೆ. ಹೆಚ್.ಡಿ.ಕೆ (hdk) ಕೂಡ ಸಚಿವರಾದ ಕೆಲ ದಿನಗಳಲ್ಲಿಯೇ, ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದರು.
ಜೊತೆಗೆ ಸಾಧ್ಯಸಾಧ್ಯತೆಗಳ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಭಾನುವಾರ ಕಾರ್ಖಾನೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಕಾರ್ಮಿಕರ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.