
ಚರಂಡಿ ಅಸ್ವಚ್ಚತೆಯಿಂದ ನಾಗರೀಕರಲ್ಲಿ ಅನಾರೋಗ್ಯ : ಕಣ್ಮುಚ್ಚಿ ಕುಳಿತ ಶಿವಮೊಗ್ಗ ಪಾಲಿಕೆ ಆಡಳಿತ!
ಶಿವಮೊಗ್ಗ (shivamogga), ಜು. 7: ಶಿವಮೊಗ್ಗ ಮಹಾನಗರ ಪಾಲಿಕೆ (city corporation) ವ್ಯಾಪ್ತಿ 5 ನೇ ವಾರ್ಡ್ ಗಾಡಿಕೊಪ್ಪದ (gadikoppa) ಆಟೋ ಸ್ಟ್ಯಾಂಡ್ ಎದುರಿನ ಮೈಸೂರು ಬೀದಿಯಲ್ಲಿ ಚರಂಡಿ ಅಸ್ವಚ್ಚತೆಯಿಂದ (sewage pollution) ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ವಿಪರೀತವಾಗಿದೆ. ನಾಗರೀಕರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
‘ಚರಂಡಿಯಲ್ಲಿ ಭಾರೀ ಪ್ರಮಾಣದ ಮಣ್ಣು ತುಂಬಿ ಮುಚ್ಚಿ ಹೋಗಿದೆ. ಕೊಳಚೆ ನೀರು ಮುಂದಕ್ಕೆ ಹರಿದು ಹೋಗುತ್ತಿಲ್ಲ. ಕಳೆದ ಕೆಲ ತಿಂಗಳುಗಳಿಂದ ಈ ದುಃಸ್ಥಿತಿಯಿದೆ. ದುರ್ನಾತ ಬೀರುತ್ತಿದೆ. ಚರಂಡಿ ಸ್ವಚ್ಛತೆಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಆಡಳಿತದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯಿಂದ ನಾಗರೀಕರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಪಾಲಿಕೆ ಆಡಳಿತದಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು (local residents) ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಮಳೆಗಾಲವಾಗಿರುವುದರಿಂದ (rainy season) ನಾನಾ ರೋಗಗಳು ಕಂಡುಬರುತ್ತಿವೆ. ಡೆಂಗ್ಯೂ ಜ್ವರ (dengue fever) ಹೆಚ್ಚಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆದ್ಯ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರ (state govt) ಸೂಚಿಸಿದೆ. ಆದರೆ ನಮ್ಮ ಪ್ರದೇಶದಲ್ಲಿ ಕನಿಷ್ಠ ಚರಂಡಿ ಸ್ವಚ್ಚತೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತದ ಈ ಧೋರಣೆ ಖಂಡನಾರ್ಹವಾದುದಾಗಿದೆ’ ಎಂದು ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಪಾಲಿಕೆ ಆಡಳಿತ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಾಗಿದೆ. ನೂತನ ಪಾಲಿಕೆ ಆಯುಕ್ತರು (corporation commissioner) ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸದ ತಮ್ಮ ಕೆಳಹಂತದ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.