
shimoga | ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ : ರಾಜ್ಯಾದ್ಯಂತ ಸದ್ದು – ನಾಗರೀಕರಲ್ಲಿ ಭಾರೀ ಸಂಚಲನ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅ. 6: ಶಿವಮೊಗ್ಗ ನಗರದಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವ ಆರೋಪ ಬೆಳಕಿಗೆ ಬಂದ ನಂತರ, ರಾಜ್ಯದ ಇತರೆಡೆಯೂ ಶಂಕಿತ ಚೀನಾ ಬೆಳ್ಳುಳ್ಳಿ ಮಾರಾಟದ ದೂರುಗಳು ಕೇಳಿಬರಲಾರಂಭಿಸಿವೆ. ಸದರಿ ವಿಷಯವು ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ!
ಶಿವಮೊಗ್ಗ ನಗರದ ವಿವಿಧೆಡೆ ಶಂಕಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡವು ಸೆಪ್ಟೆಂಬರ್ 28 ರಂದು ಹಲವೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿತ್ತು.
ಶಂಕಿತ ಬೆಳ್ಳುಳ್ಳಿಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಿತ್ತು. ಸದರಿ ಪರೀಕ್ಷಾ ವರದಿ ಇನ್ನಷ್ಟೆ ಬರಬೇಕಾಗಿದ್ದು, ಶಂಕಿತ ಬೆಳ್ಳುಳ್ಳಿಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚಿಸಿತ್ತು.
ಈ ಘಟನೆಯ ಬೆನ್ನಲ್ಲೇ, ರಾಜ್ಯದ ವಿವಿಧೆಡೆಯು ಚೀನಾ ಬೆಳ್ಳುಳ್ಳಿ ಮಾರಾಟದ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿತ್ತು. ಇದರ ಆಧಾರದ ಮೇಲೆ ಸ್ಥಳೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡಗಳು ಶಂಕಿತ ಬೆಳ್ಳುಳ್ಳಿಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾರಂಭಿಸಿದ್ದಾರೆ.
ಬಂದ್ : ಕೆಲ ವ್ಯಾಪಾರಿಗಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಶಂಕಿತ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದರು. ಅಧಿಕಾರಿಗಳ ತಂಡದ ದಾಳಿಯ ನಂತರ, ಶಂಕಿತ ಬೆಳ್ಳುಳ್ಳಿಯ ಮಾರಾಟ ಸ್ಥಗಿತಗೊಳಿಸಿದ್ದಾರೆ. ನಾಗರೀಕರು ಕೂಡ ದೇಸಿ ಬೆಳ್ಳುಳ್ಳಿಯನ್ನೇ ಕೇಳಿ ಖರೀದಿಸಲಾರಂಭಿಸಿದ್ದಾರೆ.
ಅಪಾಯಕಾರಿ : ಚೀನಾ ಬೆಳ್ಳುಳ್ಳಿಗೆ ಕೃಷಿ ಸಮಯದಲ್ಲಿ ಅತೀ ಹೆಚ್ಚು ಪ್ರಮಾಣದ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ (china garlic contained high levels of pesticides). ಇದನ್ನು ಸೇವಿಸುವ ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಯಕೃತ್ತಿನ ಹಾನಿ, ಜಠರಗರುಳಿನ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವುದು ಸೇರಿದಂತೆ ನಾನಾ ರೀತಿಯ ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುತ್ತಿದೆ.
ಈ ಕಾರಣದಿಂದಲೇ 10 ವರ್ಷಗಳ ಹಿಂದೆಯೇ ಭಾರತ ಸರ್ಕಾರ ಚೀನಾ ಬೆಳ್ಳುಳ್ಳಿ ಆಮದು ನಿಷೇಧಿಸಿತ್ತು. ದೇಶದಲ್ಲಿ ಈ ಬೆಳ್ಳುಳ್ಳಿ ಮಾರಾಟ ನಿರ್ಬಂಧಿಸಿತ್ತು. ಚೀನಾ ಬೆಳ್ಳುಳ್ಳಿಗೆ ಹೋಲಿಸಿದರೆ, ಭಾರತದಲ್ಲಿ ಬೆಳ್ಳುಳ್ಳಿ ಬೆಳೆಯುವ ವೇಳೆ ಕಡಿಮೆ ಪ್ರಮಾಣದ ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ಮಾಡಲಾಗುತ್ತದೆ.
ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ಆದರೆ ದೇಸಿ ಬೆಳ್ಳುಳ್ಳಿಗೆ ಹೋಲಿಸಿದರೆ, ಚೀನೀ ಬೆಳ್ಳುಳ್ಳಿಯು ಕಡಿಮೆ ದರಕ್ಕೆ ಲಭ್ಯವಾಗುತ್ತದೆ. ಈ ಕಾರಣದಿಂದ ವಾಮಮಾರ್ಗದಲ್ಲಿ ದೇಶದ ವಿವಿಧ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿರುವ ಆರೋಪಗಳಿವೆ.
After allegations of illegal Chinese garlic being sold in Shimoga city came to light, complaints of suspected Chinese garlic being sold in other parts of the state have also started to be heard. The matter has created a huge stir in the public sector! #chinagarlic #bannedgarlic #garlic