
shimoga | ಬೀದಿ ನಾಯಿ ಕೊಂದ ವ್ಯಕ್ತಿ ಬಂಧನ : ಮೇನಕಾ ಗಾಂಧಿ ಎಂಟ್ರಿಯಿಂದ ಗಮನ ಸೆಳೆದ ಪ್ರಕರಣ!
ಹೊಸನಗರ (hosanagara), ಜ. 19: ಬೀದಿ ನಾಯಿಯನ್ನು ಅಮಾನುಷವಾಗಿ ಕೊಂದು, ಲಗೇಜ್ ಆಟೋದ ಹಿಂಬದಿ ಕಟ್ಟಿ ಕೊಂಡೊಯ್ದ ವ್ಯಕ್ತಿಯನ್ನು, ಹೊಸನಗರ ತಾಲೂಕು ರಿಪ್ಪನ್’ಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಆಟೋ ಚಾಲಕ ವಾಜೀದ್ (40) ಬಂಧಿತ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಆಪಾದಿತನ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿ ಎನ್ ಎಸ್ ಕಾಯ್ದೆ) 325 ಕಲಂ ಅಡಿ ಪ್ರಕರಣ ದಾಖಲಿಸಿದ್ದಾರೆ.
ತದನಂತರ ನಿಯಮಾನುಸಾರ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ರಿಪ್ಪನ್’ಪೇಟೆ ಠಾಣೆ ಸಬ್ ಇನ್ಸ್’ಪೆಕ್ಟರ್ ಪ್ರವೀಣ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಏನೀದು ಘಟನೆ? : ಕೆಂಚನಾಲ ಗ್ರಾಮದವರಾದ ಆಪಾದಿತ ವಾಜೀದ್, ತಮ್ಮ ಮನೆಯಲ್ಲಿ ಜಾನುವಾರು ಹಾಗೂ ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಮನೆಯಲ್ಲಿನ ಕೋಳಿಯನ್ನು, ಸದರಿ ಬೀದಿ ನಾಯಿಯು ಹಿಡಿದು ತಿಂದಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಅವರು, ಜನವರಿ 16 ರಂದು ಕೆಂಚನಾಲ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದರು. ತದನಂತರ ನಾಯಿಯನ್ನು ತನ್ನ ಲಗೇಜ್ ಆಟೋದ ಹಿಂಬದಿ ಹಗ್ಗವೊಂದರಲ್ಲಿ ಕಟ್ಟಿ ಎಳೆದೊಯ್ದಿದ್ದಾರೆ.
ಸದರಿ ಘಟನೆಯನ್ನು ಸ್ಥಳೀಯ ಯುವಕನೋರ್ವ ತನ್ನ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಸದರಿ ವೀಡಿಯೋವನ್ನು ಪ್ರಾಣಿ ಸಂರಕ್ಷಣೆಗೆ ಸಂಬಂಧಿಸಿದ ವೆಬ್ ತಾಣವೊಂದರಲ್ಲಿ ಅಪ್’ಲೋಡ್ ಮಾಡಿದ್ದರು. ಜೊತೆಗೆ ಮೇಲ್ ಮೂಲಕ ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆಯಾದ ಮೇನಕಾ ಗಾಂಧಿ ಅವರ ಗಮನಕ್ಕೆ ತಂದಿದ್ದರು.
ವೀಡಿಯೋವನ್ನು ಗಮನಿಸಿದ ಮೇನಕಾ ಗಾಂಧಿ ಅವರು, ಜನವರಿ 17 ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಆರೋಪಿತ ವ್ಯಕ್ತಿ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.
ಜೊತೆಗೆ ಕರ್ನಾಟಕ ಪ್ರಾಣಿದಯಾ ಸಂಘದವರಿಗೂ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪಶು ವೈದ್ಯರ ಮೂಲಕ ಜನವರಿ 18 ರಂದು ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅದೇ ದಿನದಂದು ಆರೋಪಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
Hosnagar, January 19: The Hosanagara taluk Rippanpete police arrested a man who brutally killed a stray dog and tied it to the back of a luggage auto. A case under Section 325 of the Indian Penal Code (BNS Act) has been registered against the accused.
The incident was filmed by a local youth on his mobile phone. The said video was uploaded on a website related to animal protection. He also brought it to the notice of Maneka Gandhi, a former Union Minister and a national activist of the Animal Welfare Association, through mail. Maneka gandhi contacted Shivamogga SP G K Mithun Kumar to action against the accused.