
shimoga protest | ಶಿವಮೊಗ್ಗ : ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದಿಡೀರ್ ದಿಗ್ಬಂಧನ!
ಶಿವಮೊಗ್ಗ (shivamogga), ಜು. 20: ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಸುಟ್ಟು ಹಾಕಿರುವುದರ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಆಗ್ರಹಿಸಿ, ನಾಗರೀಕರು ಕಾರ್ಮಿಕ ಇಲಾಖೆ ಅಧಿಕಾರಿ – ಸಿಬ್ಬಂದಿಗಳಿಗೆ ಘೇರಾವ್ ಹಾಕಿ, ದಿಗ್ಬಂಧನ ವಿಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ಜು.20 ರ ಭಾನುವಾರ ಸಂಜೆ ನಡೆದಿದೆ.
ವಿನೋಬನಗರ ಬಡಾವಣೆಯ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಕಟ್ಟಡ ಸಂಕೀರ್ಣದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸದರಿ ಘಟನೆ ನಡೆದಿದೆ.
ರಜಾ ದಿನವಾದ ಭಾನುವಾರದಂದೆ ಅನುಮಾನಾಸ್ಪದವಾಗಿ ಕಚೇರಿಗೆ ಸಂಬಂಧಿಸಿದ ಕಡತ ಸುಟ್ಟು ಹಾಕಿದ್ದೇಕೆ? ಭಾನುವಾರದ ದಿನವೂ ಸಂಜೆಯವರೆಗೂ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವುದೇಕೆ? ಎಂಬುವುದರ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಆಕ್ರೋಶಭರಿತ ನಾಗರೀಕರು ಒತ್ತಾಯಿಸಿದ್ದಾರೆ.
ಇದರಿಂದ ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಉದ್ರಿಕ್ತ ನಾಗರೀಕರನ್ನು ಸಮಾಧಾನಗೊಳಿಸಿದ್ದಾರೆ. ಅಧಿಕಾರಿ – ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕಚೇರಿಯಿಂದ ಕಳುಹಿಸಿ ಕೊಟ್ಟಿದ್ಧಾರೆ.
ಗೊಂದಲ : ಭಾನುವಾರದಂದು ಸಂಜೆಯವರೆಗೂ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಅಧಿಕಾರಿ – ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. ಈ ನಡುವೆ ಕಚೇರಿಯಲ್ಲಿದ್ದ ಕೆಲ ಕಡತಗಳನ್ನು ಗಾಡಿಕೊಪ್ಪ ಹೊರವಲಯದ ತುಂಗಾ ಮೇಲ್ದಂಡೆ ನಾಲೆಯ ಬಳಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದು ನಾಗರೀಕರ ಅನುಮಾನಕ್ಕೆ ಕಾರಣವಾಗಿದೆ.
ಲಭ್ಯ ಮಾಹಿತಿ ಅನುಸಾರ ಕಚೇರಿಯಲ್ಲಿ ಅನಗತ್ಯವಾಗಿದ್ದ ಕಡತಗಳನ್ನು ಸುಟ್ಟು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತಂತೆ ಕಾರ್ಮಿಕ ಇಲಾಖೆಯಿಂದ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
Shimoga, Ju. 20: The incident took place in Shivamogga city on Sunday evening June 20, when the citizens protested and imposed a blockade on the labor department officials and staff, demanding that they give appropriate information about the burning of office files.