shimoga police news | ‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
ಶಿವಮೊಗ್ಗ (shivamogga), ನವೆಂಬರ್ 4: ‘ನೊಂದವರಿಗೆ ನೆರವು ಹಾಗೂ ಅಪರಾಧಿಗೆ ಶಿಕ್ಷೆ ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಿ. ಗುಣಮಟ್ಟದ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ, ನಿಮ್ಮ ಪಾತ್ರ ಬಹಳ ಮುಖ್ಯ. ತನಿಖೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ…’
ಇದು, ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ – ಐಜಿಪಿ ) ಎಂ ಎ ಸಲೀಂ ಅವರು ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ನೀಡಿದ ಸಲಹೆ. ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ನವೆಂಬರ್ 3 ರಂದು ಆಯೋಜಿಸಿದ್ದ ವಿಮರ್ಶನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ತವ್ಯದ ಬಗ್ಗೆ ಶ್ರದ್ಧೆಯಿರಲಿ. ಗುಣಮಟ್ಟದ ತನಿಖೆಯಿಂದ ಮಾತ್ರ ಶಿಕ್ಷೆಯ ಪ್ರಮಾಣ ಹಾಗೂ ಕಾನೂನುಬಾಹಿರ ಕೃತ್ಯ ಎಸಗುವ ಗುಂಪುಗಳು, ರೌಡಿ ಆಸಾಮಿಗಳಿಗೆ ಶಿಕ್ಷೆ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಉಪಟಳ ನೀಡುವವರ ವಿರುದ್ಧ ಕ್ರಮಕೈಗೊಂಡಂತೆಯೂ ಆಗುತ್ತದೆ ಎಂದು ತಿಳಿಸಿದ್ದಾರೆ.
ಪೋಲಿಸ್ ಇಲಾಖೆಯ ಪ್ರಾಥಮಿಕ ಮತ್ತು ನಿಜವಾದ ಕೆಲಸವೆಂದರೆ, ಕಾನೂನು-ಸುವ್ಯವಸ್ಥೆ ಕಾಪಾಡುವುದಾಗಿದೆ. ಜೊತೆಗೆ ನೊಂದವರಿಗೆ ನೆರವು, ಸಾರ್ವಜನಿಕರ ಸೇವೆಗೆ ಸದಾ ಲಭ್ಯವಿರುವುದು, ಸಮುದಾಯದತ್ತ ಇಲಾಖೆಯನ್ನು ಕೊಂಡೊಯ್ಯುವುದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ಹಾಗೂ ತಡೆಯುವುದು ಎಂದು ತಿಳಿಸಿದ್ದಾರೆ.
ನಿಮ್ಮ ಕೆಲಸ, ಕೈಗೊಳ್ಳುವಂತಹ ನಿರ್ಧಾರಗಳು ಮುಂದಿನ ದಿನಗಳಲ್ಲಿ ಕಾನೂನು – ಸುವ್ಯವಸ್ಥೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ಆಗ ಮಾತ್ರ ಪೊಲೀಸ್ ಕೆಲಸ ಸುಲಭವಾಗುತ್ತದೆ. ಯಶಸ್ಸು ದೊರಕುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಗಾಂಜಾ ಮಟ್ಟ ಹಾಕಿ : ಮಾದಕ ದ್ರವ್ಯದ ಕುರಿತು ತಳಮಟ್ಟದ ಮಾಹಿತಿಯನ್ನು ಸಂಗ್ರಹಿಸಿ. ಗಾಂಜಾ ಬೆಳೆಯುವವರು, ಸೇವನೆ ಮಾಡುವವರು, ಮಾರಾಟ ಮಾಡುವವರು, ಸಂಗ್ರಹಣೆ ಮಾಡುವವರು ಮತ್ತು ಸಾಗಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ. ಕಾನೂನು ರೀತಿಯ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ನಂಬಿಕೆ ಉಳಿಸಿಕೊಳ್ಳಿ : ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವಂತಹ ನಂಬಿಕೆಯ ಮೇಲೆ, ಇಲಾಖೆಯ ಯಶಸ್ಸು ನಿಂತಿರುತ್ತದೆ. ಆದ್ದರಿಂದ ನೀವು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾನೂನು ವ್ಯಾಪ್ತಿಗೆ ಒಳಪಟ್ಟು ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದ್ದಾರೆ.
ಪ್ರಮುಖ ಜಿಲ್ಲೆ : ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿ ಎಲ್ಲರ ಗಮನವನ್ನು ಸೆಳೆದಿರುವ ಒಂದು ಮುಖ್ಯವಾದ ಜಿಲ್ಲೆಯಾಗಿದ್ದು, ಶಿವಮೊಗ್ಗದಂತಹ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದರೆ ಎಲ್ಲಾ ಆಯಾಮದ policing ಅನುಭವ ದೊರೆಯಲಿದೆ. ಆದ್ದರಿಂದ ಎಲ್ಲರೂ ಶ್ರಮವಹಿಸಿ ಕರ್ತವ್ಯ ನಿರ್ವಹಿಸಿ.
ಶಿವಮೊಗ್ಗ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸಂಖ್ಯೆಯ ಪೊಲೀಸ್ ಬಲವು ಲಭ್ಯವಿದ್ದು, ಪಾರದರ್ಶಕವಾಗಿ ಮತ್ತು ಜನರ ಸಮಸ್ಯೆಗೆ ಸ್ಪಂದಿಸುವಂತೆ ಸಂಯಮದಿಂದ ವರ್ತಿಸಿ, ಸಾರ್ವಜನಿಕರ ಸೇವೆಗೆ ಸದಾ ಕಾಲ ಲಭ್ಯವಿರಿ. ನಿಮ್ಮ ಶ್ರಮವೇ ನಿಮ್ಮ ಯಶಸ್ಸನ್ನು ತೋರಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೂರ್ವ ವಲಯ ಐಜಿಪಿ ಬಿ ಆರ್ ರವಿಕಾಂತೇ ಗೌಡ, ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ ಜಿ ಕಾರಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
‘ಸರ್ಕಾರಿ ಸಾಕ್ಷಿ – ಪಂಚರನ್ನೇ ಆಯ್ದಕೊಳ್ಳಿ’
‘ಪ್ರಕರಣಗಳ ಮಹಜರುಗಳನ್ನು ನಡೆಸುವಾಗ ಮತ್ತು ಸಾಕ್ಷಿದಾರರುಗಳನ್ನು ಆಯ್ದುಕೊಳ್ಳುವಾಗ, ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರಿ ಪಂಚರನ್ನು ಮತ್ತು ಸರ್ಕಾರಿ ಸಾಕ್ಷಿದಾರರನ್ನು ಆಯ್ದುಕೊಳ್ಳಬೇಕು. ಇಂತಹ ನಡೆಯಿಂದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವು ಹೆಚ್ಚಾಗುತ್ತದೆ. ಯಾವುದೇ ತನಿಖೆ ಹಾಗೂ ಇತರ ಇಲಾಖೆಗಳೊಂದಿಗೆ ವ್ಯವಹರಿಸುವಾಗ, ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ. ಆಗ ಮಾತ್ರ ನೀವು ಮಾಡಿದಂತಹ ಕೆಲಸಕ್ಕೆ ಸೂಕ್ತ ನ್ಯಾಯ ತೊರಕಿಸಿದಂತಾಗುತ್ತದೆ’ ಎಂದು ಡಿಜಿ – ಐಜಿಪಿ ಎಂ ಎ ಸಲೀಂ ಅವರು ತಿಳಿಸಿದ್ದಾರೆ.
ಶಿವಮೊಗ್ಗ ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ..!
*** ಶಿವಮೊಗ್ಗ ಜಿಲ್ಲೆ ಒಂದು ಸೂಕ್ಷ್ಮ ಮತ್ತು ಪ್ರಮುಖವಾದ ಜಿಲ್ಲೆಯಾಗಿದೆ. ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು – ಸುವ್ಯವಸ್ಥೆ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ನ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೆನೆ. ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ, ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದೆ. ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು, ಇತರೆ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಮಟ್ಟ ಹಾಕುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ’ ಜಿಲ್ಲೆಯ ಪೊಲೀಸರಿಗೆ ಎ ಎಂ ಸಲೀಂರವರು ಸಲಹೆ ನೀಡಿದ್ದಾರೆ.
shivamogga, november 4: ‘Act on the principle of helping the victims and punishing the culprits. Your role is very important in conducting quality investigations and ensuring that the accused are punished. Perform your duty without any lapses in the investigation…’ This is the advice given to police officers and personnel by Karnataka State Police Director General M. A. Salim. He spoke while participating in a review meeting organized on November 3 at the DAR Police Hall in Shivamogga city.
