
30 ವರ್ಷಗಳ ನಂತರ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆ! : ವಾರ್ಡ್ ಗಳ ಸಂಖ್ಯೆ ಹೆಚ್ಚಳವಾ..? ಚುನಾವಣೆಯಾ..?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆ. 17: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ (shimoga city corporation limit) ಪರಿಷ್ಕರಣೆ ಹಾಗೂ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಕುರಿತಂತೆ, ಬಿರುಸಿನ ಚರ್ಚೆ ನಡೆಯಲಾರಂಭಿಸಿದೆ. ಪರಿಷ್ಕರಣೆಗೂ ಮುನ್ನವೇ ವಾರ್ಡ್ ಗಳ ಚುನಾವಣೆ ನಡೆಯಲಿದೆಯಾ? ಇಲ್ಲವೇ, ಪರಿಷ್ಕರಣೆ ನಂತರ ಎಲೆಕ್ಷನ್ ಆಗಲಿದೆಯಾ? ಎಂಬ ಕುತೂಹಲ ಮೂಡಿಸಿದೆ.
ಈಗಾಗಲೇ ರಾಜ್ಯ ಸರ್ಕಾರ (state govt) ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಅದರಂತೆ ಪಾಲಿಕೆ ಆಡಳಿತವು, ಉಪ ಆಯುಕ್ತರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚನೆ ಮಾಡಿದೆ.
ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿ (grama panchayat) ಆಡಳಿತ ಅಧೀನದಲ್ಲಿರುವ ಬಡಾವಣೆಗಳ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದೆ. ಲಭ್ಯ ಮಾಹಿತಿ ಅನುಸಾರ 23 ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ (corporation limit) ಸೇರ್ಪಡೆ ಮಾಡಿಕೊಳ್ಳುವ ಪಟ್ಟಿ ತಯಾರಿಸಿದೆ.
ಇದರ ಜೊತೆಗೆ 35 ವಾರ್ಡ್ ಗಳನ್ನು ಪರಿಷ್ಕರಿಸಿ, ನಗರ ವ್ಯಾಪ್ತಿ – ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡುವುದರ ಜೊತೆಗೆ ಮೂರು ಕಡೆ ವಲಯ ಕಚೇರಿ ಸ್ಥಾಪನೆಯ ಬಗ್ಗೆ ಪಾಲಿಕೆ ಆಡಳಿತ ಪೂರ್ವಭಾವಿ ತಯಾರಿ ನಡೆಸುತ್ತಿರುವ ಮಾಹಿತಿಯಿದೆ.
ಇದರ ಜೊತೆಜೊತೆಗೆ ಚುನಾವಣಾ ಆಯೋಗದ ಸೂಚನೆಯಂತೆ, ಪಾಲಿಕೆಗೆ ಚುನಾವಣೆಯ ತಯಾರಿ ಕೂಡ ನಡೆಯಲಾರಂಭಿಸಿದೆ. ಮತದಾರರ ಪಟ್ಟಿ ಸಿದ್ದಪಡಿಸುವ ಕಾರ್ಯ ಕೂಡ ಬಿರುಸುಗೊಂಡಿದೆ.
ಒಂದೆಡೆ ಸರ್ಕಾರದ ಸೂಚನೆಯಂತೆ ಪಾಲಿಕೆ ವ್ಯಾಪ್ತಿ – ವಾರ್ಡ್ ಗಳ ಪರಿಷ್ಕರಣೆ, ಮತ್ತೊಂದೆಡೆ ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣಾ ತಯಾರಿಯನ್ನು ಏಕಕಾಲಕ್ಕೆ ಪಾಲಿಕೆ ಆಡಳಿತ ನಡೆಸುತ್ತಿದೆ.
ಪರ – ವಿರೋಧ : ಪಾಲಿಕೆ ವ್ಯಾಪ್ತಿ – ವಾರ್ಡ್ ಸಂಖ್ಯೆ ಹೆಚ್ಚಳ ಕುರಿತಂತೆ, ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ನಗರದ ಬೆಳವಣಿಗೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಿಸಿ, ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ತದನಂತರವಷ್ಟೆ ವಾರ್ಡ್ ಚುನಾವಣೆ ನಡೆಸಬೇಕು. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂಬುವುದು ಕೆಲ ಮುಖಂಡರ ಅಭಿಪ್ರಾಯವಾಗಿದೆ.
‘ಈಗಾಗಲೇ ಪಾಲಿಕೆ ಚುನಾವಣೆ (palike election) ವಿಳಂಬವಾಗಿದೆ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆ, ವಾರ್ಡ್ ಗಳ (ward) ಸಂಖ್ಯೆ ಹೆಚ್ಚಳ ಮಾಡಿದ ನಂತರ ಚುನಾವಣೆ (election) ನಡೆಸುವುದಾದರೆ ಇನ್ನೂ ಒಂದು ವರ್ಷವಾದರೂ ಚುನಾವಣೆ ನಡೆಯುವುದಿಲ್ಲ. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕು’ ಎಂದು ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ದಶಕಗಳ ಇತಿಹಾಸ : 1994-95 ನೇ ಸಾಲಿನಲ್ಲಿ ಶಿವಮೊಗ್ಗ ನಗರ ವ್ಯಾಪ್ತಿ (shimoga city limit) ಪರಿಷ್ಕರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ನಗರಾಡಳಿತದ ವ್ಯಾಪ್ತಿಗೆ ಒಂದೇ ಒಂದು ಪ್ರದೇಶ ಸೇರ್ಪಡೆ ಮಾಡಿಕೊಂಡಿಲ್ಲ. ನಗರಸಭೆಯಿಂದ (municipality) ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ನಗರ ವ್ಯಾಪ್ತಿ ಪರಿಷ್ಕರಣೆಯಾಗಿರಲಿಲ್ಲ. ಕನಿಷ್ಠ ವಾರ್ಡ್ ಗಳ ಸಂಖ್ಯೆ ಹೆಚ್ಚಳಕ್ಕೂ ಆಡಳಿತ ಮುಂದಾಗಿರಲಿಲ್ಲ. ಬರೋಬ್ಬರಿ 30 ವರ್ಷಗಳ ನಂತರ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಚರ್ಚೆ ಮುನ್ನೆಲೆಗೆ ಬಂದಿದೆ.
ಒಟ್ಟಾರೆ ಶಿವಮೊಗ್ಗ ಮಹಾನಗರ ಪಾಲಿಕೆಯ (shimoga corporation) ವ್ಯಾಪ್ತಿ – ವಾರ್ಡ್ ಗಳ ಸಂಖ್ಯೆ ಪರಿಷ್ಕರಣೆಯಾಗಲಿದೆಯಾ? ಇಲ್ಲವೇ, ಚುನಾವಣೆ (corporation election) ನಡೆಯಲಿದೆಯಾ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.