ಸಚಿವರ ಅಧ್ಯಕ್ಷತೆಯಲ್ಲಿ ಸಭೆ : ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಶಾಸಕಿ ಬಲ್ಕೀಶ್ ಬಾನು ಆಗ್ರಹ
ಶಿವಮೊಗ್ಗ (shimoga), ಆ. 16: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ, ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಚರ್ಚೆಯಾಯಿತು. ಈಗಾಗಲೇ ರಾಜ್ಯ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದೆ.
ಅದರಂತೆ ಪಾಲಿಕೆ ಆಡಳಿತವು, ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. 23 ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಅಧಿಕಾರಿಗಳ ಸಮಿತಿ ಪಟ್ಟಿ ಸಿದ್ದಪಡಿಸಿದೆ.
ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಶಾಸಕ ಚನ್ನಬಸಪ್ಪ ಅವರು, ಪಾಲಿಕೆ ಚುನಾವಣೆ ನಡೆಸುವಂತೆ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯ ತುರ್ತು ಅಗತ್ಯವಿದೆ.
ನಗರದ ಹೊರವಲಯದ ಬಡಾವಣೆಗಳಿಗೆ ಅನುಕೂಲವಾಗಲಿದೆ. ಸರ್ಕಾರದ ಸೂಚನೆ ಹಾಗೂ ನಾಗರೀಕರ ಅಭಿಪ್ರಾಯದಂತೆ ಪಾಲಿಕೆ ವ್ಯಾಪ್ತಿ ಪರಿಷ್ಕರಿಸಿ ಚುನಾವಣೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಈ ಬಗ್ಗೆ ಸರ್ಕಾರದ ನಿರ್ದೇಶನದಂತೆ ಕ್ರಮಕೈಗೊಳ್ಳೊಣ ಎಂದು ತಿಳಿಸಿದ್ದಾರೆ.
ಮೂಲಸೌಕರ್ಯ : ಶಿವಮೊಗ್ಗ ನಗರದ ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲಸೌಕರ್ಯ ಒದಗಿಸುವ ಸಂಬಂಧ ನ್ಯೂನ್ಯತೆಗಳ ಪಟ್ಟಿಯನ್ನು ತಮಗೆ ನೀಡುವಂತೆ ಸಚಿವರು ತಿಳಿಸಿದ್ದಾರೆ.
ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40 ಎಕರೆಯಲ್ಲಿ ಒಟ್ಟು 3000 ಮನೆಗಳು ಮಂಜೂರಾಗಿದ್ದು 624 ಮನೆಗಳನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದು 225 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 399 ಮನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಾಲ ಪ್ರಕ್ರಿಯೆ ನಡೆಯುತ್ತಿದೆ. ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾದ ತಕ್ಷಣ ಹಸ್ತಾಂತರಿಸಲಾಗುವುದು. 648 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1728 ಮನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಮನೆಗಳನ್ನು ಹಸ್ತಾಂತರಿಸಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಇತರೆ ಸೌಲಭ್ಯಗಳೇ ಇಲ್ಲ. ಇದನ್ನೆಲ್ಲ ಶೀಘ್ರವಾಗಿ ಒದಗಿಸುವಂತೆ ತಿಳಿಸಿದರು.
ಶಾಸಕರಾದ ಚನ್ನಬಸಪ್ಪ ಮಾತನಾಡಿ ಪಾಲಿಕೆ ವತಿಯಿಂದ ಈ ವಸತಿ ಯೋಜನೆಗೆ ರೂ.25 ಕೋಟಿ ನೀಡಬೇಕಿದ್ದು ಈವರೆಗೆ ರೂ.9 ಕೋಟಿ ನೀಡಲಾಗಿದೆ. ಹಿಂದಿನ ಸಭೆಯಲ್ಲಿ ಆಯುಕ್ತರು ಇತರೆ ಹೆಡ್‌ನಲ್ಲಿ ಉಳಿಕೆ ಹಣವನ್ನು ನೀಡುವುದಾಗಿ ತಿಳಿಸಿದ್ದರು. ಉಳಿದ ಹಣವನ್ನು ನೀಡುವಂತೆ ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಎಕ್ಸಟ್ರಾಕ್ಟ್ ತೆಗೆದುಕೊಳ್ಳಲು ಹೋದಾಗ ಕಳೆದ 8 ರಿಂದ 10 ವರ್ಷ ನಿರಂತರವಾಗಿ ತೆರಿಗೆ ಕಟ್ಟಿದ್ದರೂ ಸಹ ಅದರ ಹಿಂದಿನ 8 ರಿಂದ 10 ವರ್ಷಗಳ ತೆರಿಗೆಯನ್ನು ಪಾವತಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳ ಆದಂತೆ ಆಗುತ್ತಿದೆ ಎಂದು ದೂರಿದರು.
ಸಚಿವರು, ಪಾಲಿಕೆಯವರು ತಮ್ಮ ಸಾಫ್ಟ್ವೇರ್‌ನಲ್ಲಿ ಅಗತ್ಯವಾದ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಹಾಗೂ ನಗರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ದೂರುಗಳಿದ್ದು ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು, ವಿದ್ಯುತ್, ಯುಜಿಡಿ ಇತರೆ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕೆಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 24*7 ಕುಡಿಯುವ ನೀರಿನ ಯೋಜನೆಯಡಿ 59 ಝೋನ್‌ಗಳ ಪೈಕಿ 18 ಝೋನ್‌ಗಳಲ್ಲಿ ಸಂಪರ್ಕ ನೀಡಲಾಗಿದ್ದು ಎಲ್ಲ ಝೋನ್‌ಗಳಲ್ಲಿ ಸಂಪರ್ಕ ನೀಡಿದ ನಂತರ ಬಿಲ್ ನೀಡಲಾಗುವುದು ಎಂದು ಸಂಬAಧಿಸಿದ ಅಧಿಕಾರಿಗಳು ತಿಳಿಸಿದರು.
ಪಾಲಿಕೆ ಆಯುಕ್ತರು ಬೈಪಾಸ್ ರಸ್ತೆಗೆ ಪೂರಕವಾಗಿ ಹೊರ ವರ್ತುಲ ರಸ್ತೆ ಅಭಿವೃದ್ದಿ, ಸುಸಜ್ಜಿತ ಮೀನು ಮಾರುಕಟ್ಟೆ ಅಭಿವೃದ್ದಿಗೆ ಅಗತ್ಯವಾದ ಅನುದಾನ ಒದಗಿಸುವಂತೆ ಸಚಿವರಿಗೆ ಕೋರಿದರು.
ಶಾಸಕರಾದ ಶಾರದಾ ಪೂರ್ಯನಾಯ್ಕ್ ಮಾತನಾಡಿ, ಅನುಪಿನಕಟ್ಟೆ ಪೋದಾರ್ ಶಾಲೆ ಬಳಿ ಪಾಲಿಕೆಯವರು ರಾತ್ರಿ ಹೊತ್ತು ಕಸ ಹಾಕುತ್ತಿದ್ದಾರೆ, ಕಟ್ಟಡದ ತ್ಯಾಜ್ಯಗಳನ್ನು ಹಾಕುತ್ತಿದ್ದು ಇದನ್ನು ನಿಲ್ಲಿಸಬೇಕು. ಪಾಲಿಕೆ ಆಯುಕ್ತರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಕಾಡಾ ಅಧ್ಯಕ್ಷರಾದ ಅಂಶುಮನ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
