
shimoga | ಶಿವಮೊಗ್ಗ ತಾಲೂಕಿನ ಅತೀ ದೊಡ್ಡ ಕೆರೆ ಅಭಿವೃದ್ದಿ ಮರೆತ ನಗರಾಭಿವೃದ್ದಿ ಪ್ರಾಧಿಕಾರ : ಗಮನಹರಿಸುವುದೆ ಸರ್ಕಾರ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 22: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿ ಸೋಮಿನಕೊಪ್ಪದಲ್ಲಿರುವ ಕೆರೆಯು, ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಸ್ತುತ ವರ್ಷ ಕೂಡ ಕೆರೆಯ ನೀರಿನ ಸಂಗ್ರಹದ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ.
ಆದರೆ ಸದರಿ ವಿಶಾಲವಾದ ಕೆರೆಯನ್ನು, ಪ್ರವಾಸಿ ತಾಣವಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿವೆ. ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಸದ್ಯ ಕೆರೆಯ ಸುತ್ತಮುತ್ತಲು ಅವ್ಯವಸ್ಥೆ ಆವರಿಸಿದ್ದು, ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.
ಅನುಷ್ಠಾನವಾಗದ ಯೋಜನೆ : ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಸೋಮಿನಕೊಪ್ಪ ಕೆರೆಯನ್ನು, ಈ ಹಿಂದೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ತನ್ನ ಬಳಿಯಿರುವ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ, ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಿ ನಗರದ ಪ್ರವಾಸಿ ತಾಣವಾಗಿ ರೂಪಿಸುವುದಾಗಿ ಹೇಳಿಕೊಂಡಿತ್ತು.
ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಏರಿಯ ಮೇಲೆ ವಾಕಿಂಗ್ ಪಾಥ್ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಕೆರೆ ಮಧ್ಯೆ ವ್ಯೂ ಪಾಯಿಂಟ್ ನಿರ್ಮಾಣ, ಮಕ್ಕಳ ಆಟದ ಸಾಮಗ್ರಿಗಳ ಅಳವಡಿಕೆ, ಆಸನಗಳ ವ್ಯವಸ್ಥೆ, ಕೆರೆ ಸುತ್ತಲೂ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವುದಾಗಿ ಹೇಳಿತ್ತು. ಈ ಸಂಬಂಧ ಸರಿಸುಮಾರು 10 ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಯೋಜನೆ ಸಿದ್ದಪಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದಿಂದಲೂ ಅನುಮತಿ ಪಡೆದುಕೊಂಡಿತ್ತು.
ಆದರೆ ತದನಂತರ ಉಲ್ಟಾ ಹೊಡೆದಿದ್ದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, ಕೆರೆ ಅಭಿವೃದ್ದಿಗೊಳಿಸುವ ಯೋಜನೆಯಿಂದ ಹಿಂದೆ ಸರಿದಿತ್ತು. ಕೆಲ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸಿ ಕೈತೊಳೆದುಕೊಂಡಿತ್ತು. ಪ್ರಾಧಿಕಾರ ನಡೆಸಿದ ಕಾಮಗಾರಿಯೂ ಕಳಪೆಯಾಗಿದ್ದ ಆರೋಪಗಳು ಕೇಳಿಬಂದಿದ್ದವು.
ಗಮನಿಸಲಿ : ಇದೀಗ ಸೋಮಿನಕೊಪ್ಪ ಕೆರೆಯನ್ನು ನಗರಾಭಿವೃದ್ದಿ ಪ್ರಾಧಿಕಾರ ತನ್ನ ಒಡೆತನಕ್ಕೆ ತೆಗೆದುಕೊಂಡ ನಂತರ, ಸದರಿ ಕೆರೆಯನ್ನು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಒಂದೆಡೆ ಕೆರೆ ಅಭಿವೃದ್ದಿಗೆ ಪ್ರಾಧಿಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮತ್ತೊಂದೆಡೆ ಸಣ್ಣ ನೀರಾವರಿ ಇಲಾಖೆಯು ತನಗೂ ಕೆರೆಗೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂದು ಸ್ಥಳೀಯ ನಾಗರೀಕರು ದೂರುತ್ತಾರೆ.
ಕೆರೆಯ ಸುತ್ತಮುತ್ತಲು ಖಾಸಗಿ ಲೇಔಟ್ ನಿರ್ಮಾಣವಾಗುತ್ತಿದ್ದು, ಕೆರೆ ಜಾಗ ಒತ್ತುವರಿಯಾಗಿರುವ ಆರೋಪಗಳಿವೆ. ಕೆಲವರು ಕೆರೆಗೆ ಘನತ್ಯಾಜ್ಯಗಳನ್ನು ತಂದು ಹಾಕುತ್ತಿದ್ದಾರೆ. ಕೆರೆ ಏರಿಯ ಮೇಲೆ ಗಿಡಗಂಟೆ ಬೆಳೆದುಕೊಂಡು ಅವ್ಯವಸ್ಥೆಯ ಆಗರವಾಗಿದೆ. ಲೇಔಟ್ ಗಳ ಚರಂಡಿ ನೀರನ್ನು ಕೆರೆಗೆ ಬಿಡಲಾಗುತ್ತಿದೆ ಎಂದು ನಾಗರೀಕರು ಆರೋಪಿಸುತ್ತಾರೆ.
ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು, ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯಾದ ಸೋಮಿನಕೊಪ್ಪ ಕೆರೆಯನ್ನು ಪ್ರವಾಸಿ ತಾಣವಾಗಿ ರೂಪಿಸಿ, ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
Shivamogga, September 22: The lake located in Sominakoppa, ward 1 of Shivamogga Municipal Corporation, is known as the largest lake in Shivamogga taluk. This year too, the water level in the lake has reached its maximum level.
But the plans to develop the vast lake as a tourist destination have been completely shelved. It has fallen victim to the administration’s blatant negligence. Currently, chaos has prevailed around the lake, with no one to speak or listen.