
shimoga kuvempu road news | ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಮುಂದುವರಿದ ಟ್ರಾಫಿಕ್ ಅವ್ಯವಸ್ಥೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 17 : ಶಿವಮೊಗ್ಗ ನಗರದ ಪ್ರಮುಖ ಹಾಗೂ ಅತೀ ಹೆಚ್ಚು ಜನ – ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲೊಂದಾದ, ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ ಮುಂದುವರಿದಿದೆ. ಸಂಚಾರಿ ನಿಯಮಗಳ ಪಾಲನೆಯಾಗುತ್ತಿಲ್ಲವೆಂಬ ದೂರುಗಳು ನಾಗರೀಕ ವಲಯದಿಂದ ಕೇಳಿಬರುತ್ತಿದೆ.
ಮೊದಲೇ ಕಿರಿದಾಗಿದ್ದ ಕುವೆಂಪು ರಸ್ತೆಯು, ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಯಿಂದ, ಮತ್ತಷ್ಟು ಕಿರಿದಾಗಿ ಪರಿಣಮಿಸಿದೆ. ಸದರಿ ರಸ್ತೆಯ ಹಲವೆಡೆ ಪಾದಚಾರಿಗಳಿರಲಿ, ವಾಹನಗಳ ಸಂಚಾರ ಕೂಡ ಅಸಾಧ್ಯವೆಂಬಂತಾಗಿದೆ.
ಮತ್ತೊಂದೆಡೆ ಸದರಿ ರಸ್ತೆಯ ಇಕ್ಕೆಲ ಹಾಗೂ ಸಮಾನಂತರ ರಸ್ತೆಗಳಲ್ಲಿ ದೊಡ್ಡ ದೊಡ್ಡ ಕರ್ಮಷಿಯಲ್ ಕಾಂಪ್ಲೆಕ್ಸ್ ಗಳು, ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಇದರಿಂದ ದಿನದಿಂದ ದಿನಕ್ಕೆ ಸದರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದು ಸುಗಮ ವಾಹನ ಸಂಚಾರದ ಮೇಲೆ ಪರಿಣಾಮ ಬೀರುವಂತಾಗಿದೆ.
ಪಾಲನೆಯಾಗುತ್ತಿಲ್ಲ : ಕುವೆಂಪು ರಸ್ತೆಯ ಹಲವು ಕಡೆ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ. ಆದರೆ ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳಲ್ಲಿಯೂ ಕಾರು ಮತ್ತೀತರ ವಾಹನಗಳನ್ನು ಯಾವುದೇ ಎಗ್ಗಿಲ್ಲದೆ ನಿಲುಗಡೆ ಮಾಡಲಾಗುತ್ತಿದೆ.
ಸದರಿ ರಸ್ತೆ ಆರಂಭದ (ಹೆಲಿಪ್ಯಾಡ್ ಸರ್ಕಲ್) ಕೆಲ ಪ್ರದೇಶ ಹೊರತುಪಡಿಸಿದರೆ, ಬಹುತೇಕ ಕಡೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅದರಲ್ಲಿಯೂ ಜೈಲ್ ವೃತ್ತದಿಂದ ಶಿವಮೂರ್ತಿ ಸರ್ಕಲ್ ನಡುವಿನ ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ.
ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಎಲ್ಲ ರೀತಿಯ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ. ಆದರೆ ರಸ್ತೆಗೆ ಹೊಂದಿಕೊಂಡಂತೆ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಪಾದಚಾರಿಗಳು ದೂರುತ್ತಾರೆ.
ಅಗಲೀಕರಣ ನೆನೆಗುದಿಗೆ : ಕುವೆಂಪು ರಸ್ತೆ ಅಗಲೀಕರಣಗೊಳಿಸಬೇಕೆಂಬ ಬೇಡಿಕೆ ಕಳೆದ ಎರಡು ದಶಕಗಳಿಂದಿದೆ. ಈ ಹಿಂದೆ ಪಿಡಬ್ಲ್ಯೂಡಿ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿತ್ತು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಸದರಿ ರಸ್ತೆಯಲ್ಲಿನ ಕೆಲ ‘ಪ್ರಭಾವಿ’ ಕಟ್ಟಡ ಮಾಲೀಕರುಗಳ ಲಾಬಿಯಿಂದ ರಸ್ತೆ ಅಗಲೀಕರಣ ಪ್ರಸ್ತಾಪ ನೆನೆಗುದಿಗೆ ಬೀಳುವಂತಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ನಂತರ ಮತ್ತಷ್ಟು ಅಪಾಯಕಾರಿಯಾದ ರಸ್ತೆ..!
*** ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಾಂತ ರೂ. ವೆಚ್ಚದಲ್ಲಿ ಕುವೆಂಪು ರಸ್ತೆ ಅಭಿವೃದ್ದಿಗೊಳಿಸಲಾಗಿತ್ತು. ಆದರೆ ಮೊದಲೇ ಅಪಾಯಕಾರಿಯಾಗಿದ್ದ ರಸ್ತೆಯು, ಕಾಮಗಾರಿಯ ನಂತರ ಮತ್ತಷ್ಟು ಅಪಾಯಕಾರಿಯಾಗಿ ಪರಿವರ್ತಿತವಾಗಿದೆ. ರಸ್ತೆ ಅಗಲ ಮತ್ತಷ್ಟು ಕಿರಿದಾಗಿದೆ. ಬೇಕಾಬಿಟ್ಟಿ ಕಾಮಗಾರಿಯ ಅನುಷ್ಠಾನ, ಭ್ರಷ್ಟಾಚಾರ, ಸಾರ್ವಜನಿಕ ಹಿತಾಸಕ್ತಿಯ ಕೊರತೆಯಿಂದ ಕೋಟ್ಯಾಂತರ ರೂ. ವೆಚ್ಚ ಮಾಡಿದರೂ ರಸ್ತೆಯ ಟ್ರಾಫಿಕ ಅವ್ಯವಸ್ಥೆ ಮಾತ್ರ ಸುಧಾರಣೆಯಾಗಿಲ್ಲವೆಂದು ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಗಮನಿಸುವರೆ ಪಾಲಿಕೆ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು?
*** ಕುವೆಂಪು ರಸ್ತೆಯ ಹಲವು ಬಹಮಹಡಿ ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನಗಳ ಪಾರ್ಕಿಂಗ್ ಗೆ ಮೀಸಲಾರ ಸೆಲ್ಲಾರ್ ಗಳು ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಆಡಳಿತ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ. ಮತ್ತೊಂದೆಡೆ, ಸಂಚಾರಿ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಟ್ರಾಫಿಕ್ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು, ಕುವೆಂಪು ರಸ್ತೆಯ ಅವ್ಯವಸ್ಥೆ ಸರಿಪಡಿಸಿ, ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
Shivamogga, Oct. 10: Traffic chaos continues on Kuvempu Road, one of the major and busiest roads in Shivamogga city. Complaints are being heard from the civic sector that traffic rules are not being followed. The already narrow Kuvempu Road has become even narrower due to the unscientific works of the Smart City and the irresponsibility of the concerned authorities. In many places on the said road, even pedestrians and vehicles are unable to move.