scholarship news | ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್ ಶಿಪ್ ಯೋಜನೆ ‘ವೈರಲ್ ಸುದ್ದಿ’ಯ ಸತ್ಯಾಂಶವೇನು? ಮಾನದಂಡಗಳೇನು?
ಶಿವಮೊಗ್ಗ (shivamogga), ಸೆ. 17: ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆಯು ಎಲ್ಲಾ ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್ ಅನ್ವಯವಾಗುವುದಿಲ್ಲ. ಈ ಯೋಜನೆಯಲ್ಲಿ ಫಲಾನುಭವಿಯಾಗಲು ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ ಎಂದು ಸೆ. 17 ರಂದು ಮಕ್ಕಳ ರಕ್ಷಣಾ ಘಟಕ (district child protection unit) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ಸ್ಕಾಲರ್‌ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದಿಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣಗಳ (social media) ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು “ಸುಳ್ಳುಸುದ್ದಿ”ಯಾಗಿದೆ.
ಈ ಯೋಜನೆಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರ ಸ್ಕಾಲರ್‌ಶಿಪ್ ಲಭಿಸುತ್ತದೆ ಎಂದು ಜಿಲ್ಲಾಧಿಕಾರಿಗಳು (shimoga dc) ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಯೋಜನೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಂದ (ಬಾಲಕರ/ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯ) ಹೊರಹೋಗಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಮಕ್ಕಳು, ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತ್ರತ ಕುಟುಂಬದಲ್ಲಿ ಜೀವಿಸುತ್ತಿದ್ದರೆ, ಕಾರಾ ಗೃಹದಲ್ಲಿರುವ ಪೋಷಕರ ಮಕ್ಕಳು, ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಮಕ್ಕಳು, ಪೋಷಕರು ಗಂಭೀರ ಸ್ವರೂಪದ ಕಾಯಿಲೆಯ (ಮಾರಣಾಂತಿಕ ಕಾಯಿಲೆ) ಸಂತ್ರಸ್ಥರ ಮಕ್ಕಳು, ಪೋಕ್ಸೋ ಸಂತ್ರಸ್ಥ ಮಕ್ಕಳು,
ಬಾಲಸ್ವರಾಜ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಮಕ್ಕಳು, ಯಾವುದೇ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣೆಗೊಳಗಾದ ಮಕ್ಕಳು, ಹೆಚ್‌ಐವಿ/ಏಡ್ಸ್ ಬಾಧಿತ (ಪೀಡಿತ) ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಅನಾಥ, ಕಾಣೆಯಾದ ಅಥವಾ ಓಡಿಹೋದ ಮಕ್ಕಳು,
ಬಾಲ ಭಿಕ್ಷುಕರು ಅಥವಾ ಬೀದಿಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು, ನಿರ್ಗತಿಕರಾಗುವುದು. ಸಂಕಷ್ಟಕ್ಕೆ ಈಡಾಗುವ ಸಂಭವವಿರುವ ಕುಟುಂಬದ ತಾಯಿ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಥವಾ ವಿಧವೆ. ವಿಚ್ಛೇದಿತೆ ಮಗು ಜೈವಿಕ ಕುಟುಂಬದಲ್ಲೇ (ವಿಸ್ತ್ರತ ಕುಟುಂಬ ಹಾಗೂ ರಕ್ತ ಸಂಬಂಧ ಒಳಗೊಂಡಂತೆ) ಮುಂದುವರೆಯುವ ಮಕ್ಕಳಿಗೆ ಈ ಯೋಜನೆ ಲಭಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷಣಾಲಯ ಕಟ್ಟಡ, 100 ಅಡಿ ರಸ್ತೆ, ಆಲ್ಕೋಳ ಶಿವಮೊಗ್ಗ, ದೂ. ಸಂಖ್ಯೆ:08182-295709 ಸಂಪರ್ಕಿಸಿ ಎಂದು ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಪ್ರಕಟಣೆ ತಿಳಿಸಿದ್ದಾರೆ.
