ಶಿವಮೊಗ್ಗ, ಡಿ. 23: ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ನಗರದ ಹೆಲಿಪ್ಯಾಡ್ ಸರ್ಕಲ್ ನಲ್ಲಿ ಡಿ. 22 ರ ರಾತ್ರಿ 10. 30 ರ ಸುಮಾರಿಗೆ ಸಂಭವಿಸಿದೆ.
ನಗರದ ಜೆಎನ್ಎನ್’ಸಿಇ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ, ಮೂಲತಃ ಮಲೆಬೆನ್ನೂರು ಸಮೀಪದ ನಿವಾಸಿಯಾದ ಜೀವನ್ (20) ಹಾಗೂ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ನೌಕರ ರೋಹಿತ್ (23) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.
ಜೀವನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೋಹಿತ್ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇವರಿಬ್ಬರು ಸಂಬಂಧಿಗಳಾಗಿದ್ದು, ಕೆಟಿಎಂ ಬೈಕ್ ನಲ್ಲಿ ಬೊಮ್ಮನಕಟ್ಟೆ ಬಡಾವಣೆಯಲ್ಲಿರುವ ಸಂಬಂಧಿಯೋರ್ವರ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಖಾಸಗಿ ಸಮಾರಂಭವೊಂದಕ್ಕೆ ಬಾಡಿಗೆ ಮೇಲೆ ತೆರಳಿ ಹಿಂದಿರುಗುತ್ತಿದ್ದ ಖಾಸಗಿ ಬಸ್, ಹೆಲಿಪ್ಯಾಡ್ ಸರ್ಕಲ್ ಮುಖ್ಯರಸ್ತೆಯಿಂದ ಅಶೋಕನಗರ ಮುಖ್ಯರಸ್ತೆಗೆ ತೆರಳುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The tragic incident in which two youths on the bike were killed as a result of a collision with a private bus, took place at the Helipad Circle of Shimoga city on December 22 at around 10.30 pm. #accident, #accidentnews, #shimogaaccident, #shivamoggaaccident, #shimogaaccidentnews, #shimogatraffic,

