
ಬಹುಮುಖ ಪ್ರತಿಭೆಯ, ಅವಿರತ ಸಾಧಕ ವೈದ್ಯನಾಥ್ ಹೆಚ್ ಯು….
ವಿಶೇಷ ಲೇಖನ : ಶಿವಮೊಗ್ಗ ನಾಗರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು, ಶಿವಮೊಗ್ಗ.
ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ಶಿವಮೊಗ್ಗದ ವೈದ್ಯನಾಥ್ ಹೆಚ್ ಯು ಅವರು ಪತ್ರಿಕಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವೈದ್ಯ ಎಂದೇ ಚಿರಪರಿಚಿತರು. ಆಡು ಮುಟ್ಟದ ಸೊಪ್ಪಿಲ್ಲ ವೈದ್ಯ ಅವರು ಮಾಡದ ಕಲಾ ಸೇವೆಯಿಲ್ಲ ಎಂಬ ಅಭಿಪ್ರಾಯ ಜನಮಾನಸದಲ್ಲಿ ಉಳಿದಿದೆ.
ಪತ್ರಕರ್ತರು, ಛಾಯಾಗ್ರಾಹಕರು, ನಾಟಕಕಾರರು, ಅನೇಕ ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಅಭಿನಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ ಮಾಡುವ ಮೂಲಕ ಅವಿರತವಾಗಿ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಕಿರುಚಿತ್ರ ಸ್ಪರ್ಧೆಗಳ ಮೂಲಕ ಹೊಸ ಪ್ರತಿಭೆಗಳ ಕೌಶಲ್ಯಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ.
ಕಿರುತರೆ ಹಾಗೂ ಬೆಳ್ಳಿತೆರೆಯಲ್ಲಿ ಕಲಾವಿದರು, ನಿರ್ದೇಶಕ, ಸಂಗೀತಗಾರರನ್ನು ಬೆಳೆಸುವ ಕಾರ್ಯವನ್ನು ಎಲೆ ಮರೆಯ ಕಾಯಂತೆ ಮಾಡಿಕೊಂಡು ಬರುತ್ತಿದ್ದಾರೆ. ಇವರ ಕಲಾ ಸೇವೆಯ ಹಾದಿಯಲ್ಲಿ ಅನೇಕ ರೀತಿಯ ನಷ್ಟ ಅನುಭವಿಸಿದ್ದಾರೆ.
‘ಹಿತ್ತಲ ಗಿಡ ಮದ್ದಲ್ಲ…’ ಎಂಬ ಮಾತಿನಂತೆ ಇವರ ಪ್ರತಿಭೆ, ಕಲಾ ಕ್ಷೇತ್ರದ ಸೇವೆ ಎಲ್ಲರಿಗೂ ತಿಳಿದಿದ್ದರೂ ಕೂಡ, ರಾಜ್ಯ ಸರ್ಕಾರ ಸಾಧಕರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ರಂತಹ ಮನ್ನಣೆಗಳಿಂದ ವಂಚಿತರಾಗಿದ್ದಾರೆ.
ಆದರೆ ಪ್ರಶಸ್ತಿ, ಸನ್ಮಾನ, ಬಹುಮಾನಗಳ ಮನ್ನಣೆಗಳ ಕುರಿತಂತೆ ಚಿಂತಿಸದೆ ಕಲಾ ಸೇವೆಯನ್ನು ವೈದ್ಯರವರು ಉಸಿರಾಗಿಸಿಕೊಂಡು ಬಂದಿದ್ದಾರೆ. ಇವರ ಸಾಧನೆ ಗಮನಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿಯನ್ನಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಪ್ರತಿಷ್ಠಿತ ಸಂಸ್ಥೆಯಾದ ಕೇಂದ್ರ ಚಲನಚಿತ್ರ ಪ್ರಮಾಣ ಪತ್ರ ಮಂಡಳಿ (ಸಿನಿಮಾ ಸೆನ್ಸಾರ್ ಬೋರ್ಡ್) ಯ ಸದಸ್ಯರನ್ನಾಗಿಯೂ ನೇಮಿಸಲಾಗಿದೆ.
ವೈದ್ಯರವರ ಸಾಧನೆ ಗಮನಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜುಲೈ 26 ರಂದು ಶಿವಮೊಗ್ಗ ನಗರದಲ್ಲಿ ಅವರಿಗೆ ಸನ್ಮಾನ ಹಮ್ಮಿಕೊಂಡಿದೆ. ಇದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಅವರ ಕಿರಿಯ ಸ್ನೇಹಿತನಾಗಿ ಮನಪೂರ್ವಕವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ. ರಾಷ್ಟ್ರ – ರಾಜ್ಯಮಟ್ಟದಲ್ಲಿ ಮತ್ತಷ್ಟು ಉತ್ತುಂಗ ಸಾಧನೆ ಅವರು ಮಾಡಲಿ, ಶಿವಮೊಗ್ಗ ಜಿಲ್ಲೆಯ ಕೀರ್ತಿ ಪತಾಕೆಯನ್ನು ಇನ್ನಷ್ಟು ಉತ್ತುಂಗಕ್ಕೆ ಹಾರಿಸಲಿ ಎಂದು ಪ್ರಾರ್ಥಿಸುತ್ತೆನೆ.
ಲೇಖಕರ ಪರಿಚಯ :-

ಶಿವಮೊಗ್ಗ ನಾಗರಾಜ್ ಅವರು ಕಳೆದ ಎರಡು ದಶಕಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ವನ್ಯಜೀವಿ, ಜನಸಾಮಾನ್ಯರ ಜೀವನಶೈಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಪರೂಪದ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇವರ ಹಲವು ಛಾಯಾಚಿತ್ರಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿ ಮನ್ನಣೆಗೆ ಪಾತ್ರವಾಗಿವೆ. ಆಗಾಗ್ಗೆ ವ್ಯಕ್ತಿ ಪರಿಚಯ ಬರಹಗಳ ಮೂಲಕವು ಅವರು ಗಮನ ಸೆಳೆದಿದ್ದಾರೆ.