shimoga | ಶಿವಮೊಗ್ಗ : ಅರ್ಧಕ್ಕೆ ಸ್ಥಗಿತಗೊಂಡ ಜಿಪಂ ಕಟ್ಟಡ ಕಾಮಗಾರಿ – ಗಮನಿಸುವರೆ ಸಿಎಂ, ಸಚಿವರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 24: ಶಿವಮೊಗ್ಗ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಹಿಂಭಾಗದಲ್ಲಿ, ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಿಪಂಗೆ ಸಂಬಂಧಿಸಿದ ಅತ್ಯಾಧುನಿಕ ಕಟ್ಟಡದ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ!
ಕಳೆದ ಸರಿಸುಮಾರು 1 ವರ್ಷದಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಪಾಳು ಬೀಳಲಾರಂಭಿಸಿದೆ. ಕಟ್ಟಡದ ಒಳಾಂಗಣ, ಹೊರಾಂಗಣದಲ್ಲಿ ಗಿಡಗಂಟೆ ಬೆಳೆದುಕೊಂಡಿದೆ. ಕಟ್ಟಡಕ್ಕೆ ಮಾಡಲಾಗಿದ್ದ ಕೋಟ್ಯಾಂತರ ರೂ. ವ್ಯರ್ಥವಾಗಲಾರಂಭಿಸಿದೆ.
ನಿರ್ಮಿತಿ ಕೇಂದ್ರವು ಕಟ್ಟಡ ನಿರ್ಮಾಣದ ಜವಾಬ್ದಾರಿ ನಿರ್ವಹಿಸುತ್ತಿದೆ. ಆದರೆ ಅನುದಾನದ ಕೊರತೆಯ ಕಾರಣದಿಂದ, ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿದೆ ಎಂಬ ಮಾಹಿತಿ ಜಿಪಂ ಆಡಳಿತ ವಲಯದಿಂದ ಕೇಳಿಬರಲಾರಂಭಿಸಿದೆ.
ಏನೀದು ಕಟ್ಟಡ? : ಜಿಪಂಗೆ ಸಂಬಂಧಿಸಿದ ಸಭೆಗಳನ್ನು ನಡೆಸುವುದಕ್ಕೆ, ಹಾಲಿಯಿರುವ ಜಿಪಂ ಕಟ್ಟಡದಲ್ಲಿರುವ ಸಭಾಂಗಣಗಳು ಚಿಕ್ಕದಾಗಿವೆ. ಈ ಕಾರಣದಿಂದ ಸಭೆ ನಡೆಸುವುದಕ್ಕಾಗಿಯೇ, ವಿಶಾಲವಾದ ಹಾಗೂ ಅತ್ಯಾಧುನಿಕ ವ್ಯವಸ್ಥೆಗಳನ್ನೊಳಗೊಂಡ, ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿತ್ತು.
ಈ ಕುರಿತಂತೆ ಜಿಪಂ ಆಡಳಿತ ಸಲ್ಲಿಸಿದ್ದ ಪ್ರಸ್ತಾಪಕ್ಕೆ, ರಾಜ್ಯ ಸರ್ಕಾರ ಅನುಮತಿ ನೀಡಿತ್ತು. 2019 – 20 ನೇ ಸಾಲಿನಲ್ಲಿ ಅಂದು ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪರವರು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ತದನಂತರ ಸಮರೋಪಾದಿಯಲ್ಲಿ ಕಾಮಗಾರಿ ಆರಂಭವಾಗಿತ್ತು. ಕಾಲಮಿತಿಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿದ್ದವು. ಮೊದಲ ಹಂತದಲ್ಲಿ ಸರ್ಕಾರದ ಬಿಡುಗಡೆಗೊಳಿಸಿದ್ದ ಅನುದಾನ ಖರ್ಚಾದ ನಂತರ, ಬಾಕಿ ಅನುದಾನ ಬಿಡುಗಡೆಯಾಗಿರಲಿಲ್ಲ.
ಇದರಿಂದ ಕಟ್ಟಡ ನಿರ್ಮಾಣದ ಜವಾಬ್ದಾರಿ ನಿರ್ವಹಿಸುತ್ತಿದ್ದ, ನಿರ್ಮಿತಿ ಕೇಂದ್ರವು ಕಳೆದ ಹಲವು ತಿಂಗಳುಗಳ ಹಿಂದೆಯೇ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದೆ. ಸದ್ಯ ಕಟ್ಟಡ ಪಾಳು ಬೀಳಲಾರಂಭಿಸಿದೆ.
ಅಗತ್ಯವಿದೆ ಅನುದಾನ : ಸದ್ಯ ಕಟ್ಟಡದ ಬಾಕಿ ಕೆಲಸಕಾರ್ಯಗಳ ಪೂರ್ಣಕ್ಕೆ ಸರಿಸುಮಾರು 9 ಕೋಟಿ ರೂ.ಗಳ ಅಗತ್ಯವಿದೆ ಎನ್ನಲಾಗಿದೆ. ಈ ಕುರಿತಂತೆ ಸರ್ಕಾರದಿಂದ ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗಿಲ್ಲವೆಂದು ಹೇಳಲಾಗುತ್ತಿದೆ.
ಗಮನಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಇತ್ತ ಗಮನಹರಿಸಬೇಕಾಗಿದೆ. ಕಟ್ಟಡ ಕಾಮಗಾರಿ ಪೂರ್ಣಕ್ಕೆ ಅಗತ್ಯವಾದ ಬಾಕಿ ಮೊತ್ತ ಬಿಡುಗಡೆಗೆ ಕ್ರಮಕೈಗೊಳ್ಳಲಿದ್ದಾರೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
Shivamogga, September 24: Behind the Zilla Panchayat office in Shivamogga city, the construction of a building related to ZP, which is being built at a cost of crores of rupees, has been halted halfway!
