bhadravati | ಭದ್ರಾವತಿ : ಪೊಲೀಸರ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಲು ಯತ್ನಿಸಿದವನ ಕಾಲಿಗೆ ಗುಂಡು!
ಭದ್ರಾವತಿ (bhadravathi), ಏ. 15: ಭದ್ರಾವತಿಯಲ್ಲಿ ಮತ್ತೊಂದು ಪೊಲೀಸ್ ಫೈರಿಂಗ್ ನಡೆದಿದೆ. ಈ ಬಾರಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ ಏ. 15 ರ ಬೆಳಿಗ್ಗೆ ನಡೆದಿದೆ.
ಭದ್ರಾವತಿ ನಗರದ ಅನ್ವರ್ ಕಾಲೋನಿ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುವ ನಸ್ರು ಅಲಿಯಾಸ್ ನಸ್ರುಲ್ಲಾ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಜಿ ಕೆ ಮಿಥುನ್ ಕುಮಾರ್ ಮಾಧ್ಯಮ ಸಂದೇಶದಲ್ಲಿ ತಿಳಿಸಿದ್ದಾರೆ.
ಏ. 14 ರಂದು ಹಳೇನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. 1.4 ಕೆಜಿ ಗಾಂಜಾ ವಶಕ್ಕೆ ಪಡೆದಿತ್ತು.
ಪ್ರಕರಣದ ಮುಖ್ಯ ಆರೋಪಿ ನಸ್ರು ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದರು. ಏ. 15 ರ ಮುಂಜಾನೆ ಆರೋಪಿ ಅಡಗಿಕೊಂಡಿದ್ದ ಸ್ಥಳದ ಮೇಲೆ ಪಿಎಸ್ಐ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ವೇಳೆ ಆರೋಪಿಯು ತನ್ನ ಬಳಿಯಿದ್ದ ಡ್ರ್ಯಾಗರ್ ಮೂಲಕ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ. ನಂತರ ಕಂಟ್ರಿ ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದ. ತಕ್ಷಣವೇ ಪಿಎಸ್ಐ ಚಂದ್ರಶೇಖರ್ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಜೊತೆಗೆ ಕಂಟ್ರಿ ಪಿಸ್ತೂಲ್ ನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಜಿ ಕೆ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿ ಹಾಗೂ ಆತನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhadravati, Apr. 15: Another police firing took place in Bhadravati. This time, the police shot and arrested an accused who was selling ganja on the morning of Apr. 15.
The arrested accused has been identified as Nasru alias Nasrullah (21). Five cases have been registered against him in various police stations, SP G K Mithun Kumar said in a media release.
The accused attacked and injured the police personnel with his drager and then tried to shoot at the police with his country pistol. Immediately, PSI Chandrashekhar shot the accused in the leg and arrested him. He also seized the country pistol.
