shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಡ್ರೋಣ್ ಮೂಲಕ ಸರ್ವೇ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆ. 19: ಬರೋಬ್ಬರಿ ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ, ಮಾಹಿತಿ ಕಲೆ ಹಾಕುವ ಕಾರ್ಯಕ್ಕೆ ಮಹಾನಗರ ಪಾಲಿಕೆ (shimoga corporation) ಆಡಳಿತ ಚಾಲನೆ ನೀಡಿದೆ!
ಕಳೆದ ಕೆಲ ದಿನಗಳಿಂದ, ಪಾಲಿಕೆ ಅಧಿಕಾರಿಗಳ ತಂಡವು ‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ’ಗೆ ಅನುಗುಣವಾಗಿ, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬಹುದಾದ ಪ್ರದೇಶಗಳ ವಿವರ ಕಲೆ ಹಾಕುವ ಕಾರ್ಯ ನಡೆಸಲಾರಂಭಿಸಿದೆ.
ಈ ವಿಷಯವನ್ನು ಪಾಲಿಕೆ ಆಯುಕ್ತೆ (shimoga palike commissioner) ಕವಿತಾ ಯೋಗಪ್ಪನವರ್ ಖಚಿತಪಡಿಸಿದ್ದಾರೆ. ಸೆ. 19 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಪೌರಾಡಳಿತ ಇಲಾಖೆ ನಿರ್ದೇಶನದಂತೆ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಸಂಬಂಧ ಗ್ರಾಮ ಪಂಚಾಯ್ತಿ ಅಧೀನದ ಪ್ರದೇಶಗಳ ಸರ್ವೇ ನಡೆಸಲಾಗುತ್ತಿದೆ.
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ ಸೆಕ್ಷನ್ 3 ರ ಮಾನದಂಡಗಳಿಗೆ ಅನುಗುಣವಾಗಿ, ಪ್ರದೇಶಗಳ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಈ ಸಂಬಂಧ ನಗರಾಭಿವೃದ್ದಿ ಪ್ರಾಧಿಕಾರದ ಮಹಾ ಯೋಜನೆಯ ವಿವರ ಪಡೆದುಕೊಳ್ಳಲಾಗಿದೆ. ನಿಯಮಾನುಸಾರ ಯಾವ್ಯಾವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂಬುವುದರ ಮಾಹಿತಿಯನ್ನು ಪಾಲಿಕೆ ಅಧಿಕಾರಿಗಳ ತಂಡ ಸಂಗ್ರಹಿಸುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಅತ್ಯಂತ ಕರಾರುವಕ್ಕಾಗಿ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದೆ. ಡ್ರೋಣ್ ಮೂಲಕವೂ ಪ್ರದೇಶಗಳ ಸಮೀಕ್ಷೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಗೆ ಪ್ರದೇಶಗಳ ಸೇರ್ಪಡೆ ವಿಚಾರದಲ್ಲಿ ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಸಹಕಾರಿ : 1994-95 ರ ಅವಧಿಯಲ್ಲಿ ಅಂದಿನ ನಗರಸಭೆ ಆಡಳಿತದ ವೇಳೆ ಶಿವಮೊಗ್ಗ ನಗರ ವ್ಯಾಪ್ತಿ (shimoga city limit) ಪರಿಷ್ಕರಿಸಲಾಗಿತ್ತು. 2012 -13 ನೇ ಸಾಲಿನಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆ ವೇಳೆಯೂ ಅಂದಿನ ನಗರಸಭೆ ವ್ಯಾಪ್ತಿಯೇ ಉಳಿಸಿಕೊಳ್ಳಲಾಗಿತ್ತು. ನಗರದಂಚಿನ ಇತರೆ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡಿರಲಿಲ್ಲ.
ದೇಶ – ರಾಜ್ಯದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳ ಸಾಲಿನಲ್ಲಿ ಶಿವಮೊಗ್ಗ ಸ್ಥಾನ ಪಡೆದಿದ್ದರೂ, ನಗರದ ಬೆಳವಣಿಗೆಗೆ ಅನುಗುಣವಾಗಿ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿರಲಿಲ್ಲ. ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ನಾಗರೀಕ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಈ ನಡುವೆ ಪೌರಾಡಳಿತ ಇಲಾಖೆಯು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಸಂಬಂಧ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಸಂಬಂಧ ಪಾಲಿಕೆ ಆಯುಕ್ತರು ಅಧಿಕಾರಿಗಳ ತಂಡ ರಚನೆ ಮಾಡಿದ್ದರು.
ಆದರೆ ಸದರಿ ತಂಡ ಮಾಹಿತಿ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿರಲಿಲ್ಲ. ಕಳೆದ ತಿಂಗಳು ಆಯುಕ್ತರು ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ, ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ.
‘ವೈಜ್ಞಾನಿಕವಾಗಿ ನಗರ ವ್ಯಾಪ್ತಿ ಪರಿಷ್ಕರಣೆ’ : ಆಯುಕ್ತೆ ಕವಿತಾ ಯೋಗಪ್ಪನವರ್
*** ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯನ್ನು ಅತ್ಯಂತ ವೈಜ್ಞಾನಿಕವಾಗ ಹಾಗೂ ಮುನ್ಸಿಫಲ್ ಕಾರ್ಪೋರೇಷನ್ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗುತ್ತಿದೆ. ಡ್ರೋಣ್ ಮೂಲಕವೂ ಸರ್ವೇ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಗರಾಭಿವೃದ್ದಿ ಪ್ರಾಧಿಕಾರದ ಮಹಾ ಯೋಜನೆಯ ವಿವರ ಕೂಡ ಪಡೆಯಲಾಗಿದೆ. ಅಧಿಕಾರಿಗಳ ತಂಡ ಪ್ರತಿಯೊಂದು ಪ್ರದೇಶಗಳಿಗೂ ಖುದ್ದು ಭೇಟಿಯಿತ್ತು ವಿವರ ಕಲೆ ಹಾಕುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ (shivamogga palike commissioner dr kavitha yogappanavar) ಅವರು ತಿಳಿಸಿದ್ದಾರೆ.
