shimoga rain | ಭಾರೀ ಮಳೆ : ಬೆಂಗಳೂರು ರೀತಿ ಮುಳುಗಡೆಯಾಗುತ್ತಿರುವ ಶಿವಮೊಗ್ಗ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅ. 20: ಶಿವಮೊಗ್ಗ ನಗರದಲ್ಲಿ ಶನಿವಾರ ರಾತ್ರಿಯಿಂದ ಬೀಳುತ್ತಿರುವ ಭಾರೀ ಮಳೆ, ಭಾನುವಾರ ಬೆಳಿಗ್ಗೆಯು ಮುಂದುವರಿದಿದೆ. ಇದರಿಂದ ನಗರದ ಸಾಕಷ್ಟು ಜನವಸತಿ ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ!
ಹಲವೆಡೆ ಚರಂಡಿ, ರಾಜಕಾಲುವೆಗಳ ನೀರು ಉಕ್ಕಿ ಹರಿದು ರಸ್ತೆ ಹಾಗೂ ಮನೆಗಳಿಗೆ ನುಗ್ಗಿದೆ. ಎಲ್ಲೆಲ್ಲೂ ಜಲಾವೃತ ಸಮಸ್ಯೆ ಕಂಡುಬರಲಾರಂಭಿಸಿದೆ. ತಮ್ಮ ಪ್ರದೇಶಗಳಲ್ಲಿನ ಜಲಾವೃತ ಸಮಸ್ಯೆಗಳ ಪೋಟೊ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾಗರೀಕರು ಅಪ್’ಲೋಡ್ ಮಾಡುವ ಮೂಲಕ, ತಾವು ಎದುರಿಸುತ್ತಿರುವ ಸಂಕಷ್ಟವನ್ನು ಆಡಳಿತದ ಗಮನ ಸೆಳೆಯುವ ಕಾರ್ಯ ನಡೆಸುತ್ತಿದ್ದಾರೆ.
‘ಭಾರೀ ಮಳೆಯಾದ ವೇಳೆ ಕೆಲ ಪ್ರದೇಶಗಳು ಮಾತ್ರ ಜಲಾವೃತವಾಗುತ್ತಿದ್ದವು. ತುಂಗಾ ನದಿ ಉಕ್ಕಿ ಹರಿದ ವೇಳೆ, ಹಲವೆಡೆ ಪ್ರವಾಹ ಸ್ಥಿತಿ ಎದುರಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಪ್ರತಿಷ್ಠಿತ ಬಡಾವಣೆಗಳು ಜಲಾವೃತವಾಗುತ್ತಿವೆ. ಪ್ರಮುಖ ರಸ್ತೆಗಳು ಕೆರೆಯಂತಾಗಿ ಪರಿವರ್ತಿತವಾಗುತ್ತಿವೆ.
ಇದಕ್ಕೆ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು, ನಗರದಂಚಿನಲ್ಲಿ ಕಣ್ಮರೆಯಾಗುತ್ತಿರುವ ಕೆರೆಕಟ್ಟೆಗಳು, ಒತ್ತುವರಿಯಾಗಿರುವ ರಾಜಕಾಲುವೆ – ಚರಂಡಿಗಳು, ಬೇಕಾಬಿಟ್ಟಿಯಾಗಿ ನಿರ್ಮಾಣವಾಗುತ್ತಿರುವ ಲೇಔಟ್ ಗಳು, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ಕನಿಷ್ಠ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದರಿಂದ ಜಲಾವೃತ ಸಮಸ್ಯೆ ಉಲ್ಬಣಿಸುವಂತಾಗಿದೆ.
ಭಾರೀ ಮಳೆಯಾದ ವೇಳೆ ಬೆಂಗಳೂರು (bengaluru rain) ರೀತಿಯಲ್ಲಿ ಶಿವಮೊಗ್ಗ ನಗರವೂ ಮುಳುಗಡೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಾವೃತ ಸ್ಥಿತಿ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ನಗರದ ಪ್ರಜ್ಞಾವಂತ ನಾಗರೀಕರು ಹೇಳುತ್ತಾರೆ.
ಎಚ್ಚೆತ್ತುಕೊಳ್ಳಲಿ : ಶಿವಮೊಗ್ಗ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ. ರಾಜಕಾಲುವೆ, ಚರಂಡಿಗಳ ಒತ್ತುವರಿ ತೆರವುಗೊಳಿಸಬೇಕಾಗಿದೆ. ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
ಮಳೆ ಆರ್ಭಟಕ್ಕೆ ಜನಜೀವನ ತತ್ತರ!
*** ಕಳೆದ ಕೆಲ ದಿನಗಳಿಂದ ಶಿವಮೊಗ್ಗದಲ್ಲಿ ಮಳೆಯಬ್ಬರ ಕಡಿಮೆಯಾಗಿತ್ತು. ಶನಿವಾರ ರಾತ್ರಿಯಿಂದ ಮತ್ತೆ ಭಾರೀ ಮಳೆಯಾಗುತ್ತಿದ್ದು, ಭಾನುವಾರ ಮುಂಜಾನೆಯಿಂದ ಕೂಡ ಬಿಟ್ಟುಬಿಡದೆ ಮಳೆಯಾಗುತ್ತಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಕೆರೆಕಟ್ಟೆಗಳು ಮತ್ತೆ ಕೋಡಿ ಬಿದ್ದು ಹರಿಯಲಾರಂಭಿಸಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
Heavy rains in Shimoga city since Saturday night continued on Sunday morning. This has created a waterlogging problem in many residential areas of the city. People’s lives are chaotic! In many places, the water of drains and royal canals has overflowed and entered the roads and houses. Flooding problem is starting to appear everywhere. By uploading photos and videos of water-logged problems in their areas on social media, citizens are working to draw the attention of the administration to the problems they are facing.
