bhadravati news | ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
ಭದ್ರಾವತಿ (bhadravati), ಸೆಪ್ಟೆಂಬರ್ 24: ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೋರ್ವರಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ ತೋಟದ ಮನೆ ನಿವಾಸಿ ಗುರೋಜಿ ರಾವ್ (48) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಆಶಾ (35) ಎಂಬ ಮಹಿಳೆಗೆ 1000 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ 4 ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, 23-09-2025 ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡನೆ ಮಾಡಿದ್ದರು.
ಸೆಪ್ಟೆಂಬರ್ 24 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ನ್ಯಾಯಾಲಯದ ತೀರ್ಪಿನ ಕುರಿತಂತೆ ಮಾಹಿತಿ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ : ಭದ್ರಾವತಿಯ ಉಜ್ಜನಿಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು, ಬೇರೆ ಜಾತಿಯ ವ್ಯಕ್ತಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. 06-02-2020 ರಂದು ಗುರೋಜಿ ರಾವ್ ಮತ್ತು ಆಶಾ ರವರು ಸದರಿ ಮಹಿಳೆಯೊಂದಿಗೆ ಜಗಳ ಮಾಡಿಕೊಂಡಿದ್ದರು.
ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು. ಜೊತೆಗೆ ಬ್ಲೇಡ್ ನಿಂದ ಗಾಯ ಮಾಡಿದ್ದರು. ಹಾಗೆಯೇ ಮಹಿಳೆಯ ಪತಿಗೆ ಮರದ ರಿಪೀಸ್ ನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದರು.
ಈ ಕುರಿತಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ : 017/2020 ಐಪಿಸಿ ಕಲಂ 323, 324, 504, 34 ಮತ್ತು ಎಸ್.ಸಿ ಮತ್ತು ಎಸ್.ಟಿ ಪಿ.ಎ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. ಅಂದಿನ ಭದ್ರಾವತಿ ಡಿವೈಎಸ್ಪಿ ಸುಧಾಕರ್ ನಾಯ್ಕ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
Bhadravati, September 24: The 4th Additional District and Sessions Court of Bhadravati has sentenced a person to 4 years rigorous imprisonment in a case of caste abuse and assault.
